Advertisement

ಭದ್ರಾ ನಾಲೆಗೆ ಹೊಸ ಸೇತುವೆ ನಿರ್ಮಿಸಿ

05:02 PM May 30, 2019 | Team Udayavani |

ದಾವಣಗೆರೆ: ಯಾವುದೇ ರೀತಿಯ ಅವಘಡ, ಪ್ರಾಣಹಾನಿ ಆಗುವ ಮುನ್ನ ವೇ ತಾಲೂಕಿನ ಅಣಬೇರು ಗ್ರಾಮದ ಸಮೀಪ ಭದ್ರಾ ನಾಲೆಗೆ ಹೊಸ ಸೇತುವೆಗಳ ನಿರ್ಮಾಣ ಮಾಡಬೇಕು ಎಂದು ಅಣಬೇರು ಗ್ರಾಮ ಪಂಚಾಯತಿ ಸದಸ್ಯ ಅಣಬೇರು ಶಿವಮೂರ್ತಿ ಒತ್ತಾಯಿಸಿದ್ದಾರೆ.

Advertisement

ಅಣಬೇರು ಗ್ರಾಮದ ಸುತ್ತಲೂ ಭದ್ರಾ ಚಾನಲ್ ಹಾದು ಹೋಗಿದೆ. ಅಕ್ಕ ಪಕ್ಕದ ಹಳ್ಳಿ, ಹೊಲಗದ್ದೆಗಳಿಗೆ ಮತ್ತು ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಿರುವಂತೆ ಒಟ್ಟು 5 ಸೇತುವೆಗಳನ್ನು 1960ರಲ್ಲಿ ನಿರ್ಮಿಸಲಾಗಿದ್ದು ಎರಡು ವರ್ಷದ ಹಿಂದೆ ಒಂದು ಸೇತುವೆ ಕುಸಿದು ಬಿದ್ದು ಉಳಿದ ನಾಲ್ಕು ಸೇತುವೆ ಕುಸಿದು ಬೀಳುವ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸೇತುವೆ ಯಾವುದೇ ಸಂದರ್ಭದಲ್ಲೇ ಆಗಲಿ ಕುಸಿದು ಬೀಳುವ ಹಂತದಲ್ಲಿದೆ. ಈ ಸೇತುವೆ ಮೇಲೆ ಪ್ರತಿನಿತ್ಯ ಲಾರಿ, ದ್ವಿಚಕ್ರ ವಾಹನ ಒಳಗೊಂಡಂತೆ ನೂರಾರು ವಾಹನ ಸಂಚರಿಸುತ್ತವೆ. ಪ್ರತಿ ಸಂದರ್ಭದಲ್ಲಿ ಸೇತುವೆ ಅಲುಗಾಡುತ್ತದೆ. ಸಾರ್ವಜನಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದೆ ಎಂದು ತಿಳಿಸಿದ್ದಾರೆ.

ರೈತ ಸಂಘದ ಪೂಜಾರ್‌ ಶಿವಲಿಂಗಪ್ಪ ಎಂಬುವರು ಸೇತುವೆ ಮೇಲಿನಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ನಿತ್ಯ ಒಬ್ಬರಲ್ಲ ಒಬ್ಬರು ಬೀಳುವುದು ಸಾಮಾನ್ಯ ಎನ್ನುವಂತಾಗಿದೆ. ಜನರು ಪ್ರಾಣ ಕಳೆದುಕೊಳ್ಳುವ ಭೀತಿಯಲ್ಲೇ ಅನಿವಾರ್ಯವಾಗಿ ಓಡಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಒಂದೊಮ್ಮೆ ಏನಾದರೂ ಈ ಸೇತುವೆ ಸಂಪೂರ್ಣವಾಗಿ ಬಿದ್ದರೆ ಸುಮಾರು 50 ಹಳ್ಳಿಗಳಿಗೆ ಅಂದರೆ ಚಿತ್ರದುರ್ಗ, ಹೊಸದುರ್ಗ, ತ್ಯಾವಣಿಗಿ, ಚನ್ನಗಿರಿ ಮಾರ್ಗವಾಗಿ ಹೋಗುವ ವಾಹನಗಳಿಗೆ ಮತ್ತು ಜನರಿಗೆ ತುಂಬಾ ತೊಂದರೆಯಾಗಲಿದೆ. ನಲ್ಕುಂದ, ಅಣಬೇರು, ಕ್ಯಾತನಹಳ್ಳಿ, ಶಂಕರನಹಳ್ಳಿ ಹೊಲ ಮತ್ತು ಗ್ರಾಮಗಳಿಗೆ ಹೋಗಿ ಬರಲು 5 ಕಿಲೋ ಮೀಟರ್‌ ಸುತ್ತ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

ಈಗಾಗಲೆ ನೀರಾವರಿ ಇಲಾಖೆಯ ಅಭಿಯಂತರರು ಭೇಟಿ ನೀಡಿ 1.25 ಕೋಟಿ ಅಂದಾಜು ವೆಚ್ಚದ ನೂತನ ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಬೆಂಗಳೂರಿನ ನೀರಾವರಿ ಇಲಾಖೆಯ ನಿಗಮಕ್ಕೆ ಸಲ್ಲಿಸಿದ್ದಾರೆ. ಆದರೆ, ಈವರೆಗೆ ಯಾವುದೇ ಸುಳಿವು ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ, ಇಲಾಖೆಯಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ, ನಾವೇನು ಮಾಡಲಿ ಎಂದು ಹೇಳುತ್ತಿದ್ದಾರೆ.

ದೊಡ್ಡ ಅವಘಡಗಳು ಸಂಭವಿಸಿ ಪ್ರಾಣ ಹಾನಿ ಆಗುವ ಮೊದಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಹೊಸ ಸೇತುವೆಗಳ ನಿರ್ಮಾಣಕ್ಕೆ ಮುಂದಾಗಬೇಕು. ಸಂಸದರು ಮತ್ತು ಮಾಯಕೊಂಡ ಶಾಸಕರು ಹೊಸ ಸೇತುವೆಗಳ ನಿರ್ಮಾಣಕ್ಕೆ ಆಸಕ್ತಿ ವಹಿಸಿ, ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಗ್ರಾಮದ ಮುಖಂಡರಾದ ಕೆ.ಸಿ. ರಾಜಪ್ಪ, ಎಸ್‌. ಪಾಲಾಕ್ಷಪ್ಪ, ಪಿ. ಆನಂದಪ್ಪ, ಎ.ಎಂ. ನಂದೀಶ್ವರಯ್ಯ, ಜೆ.ಆರ್‌. ಸುರೇಶ್‌, ಎ.ಕೆ. ಮಂಜಪ್ಪ, ಎಸ್‌. ದಾದಾಪೀರ್‌, ಎ.ಎನ್‌. ಪರಮೇಶ್ವರಪ್ಪ, ಇತರರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next