Advertisement

ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸಿದ ಬಸವಣ್ಣ: ಶ್ರೀ

01:14 PM May 12, 2019 | Naveen |

ದಾವಣಗೆರೆ: ಮಹಿಳೆಯರಿಗೆ ಮನ್ನಣೆ ನೀಡಿ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ದೊರಕಿಸಿಕೊಟ್ಟ ಶ್ರೇಷ್ಠ ವ್ಯಕ್ತಿ ಬಸವಣ್ಣ ಎಂದು ಚನ್ನಗಿರಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

Advertisement

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ವಿಶ್ವ ವೀರಶೈವ ಲಿಂಗಾಯಿತ ಏಕೀಕರಣ ಪರಿಷತ್‌ ಸೇರಿದಂತೆ ವಿವಿಧ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಗುರು ರೇಣುಕರ ಯುಗಮಾನೋತ್ಸವ, ಬಸವ ಜಯಂತಿ, ವಿಶ್ವ ಕಾರ್ಮಿಕರ ದಿನಾಚರಣೆ, ಮಹಿಳಾ ದಿನಾಚರಣೆ, ಗ್ರಾಹಕರ ದಿನಾಚರಣೆ, ಬಸವಶ್ರೀ, ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

12ನೇ ಶತಮಾನದ ಕಾಲಘಟ್ಟದಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬರದೇ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುತ್ತಿದ್ದ ಅಪಮಾನ, ಅವಮಾನವನ್ನು ಸರಿಪಡಿಸಿ ಪುರುಷರಷ್ಟೇ ಸಮಾನ ಹಕ್ಕು ದೊರಕಿಸಿಕೊಟ್ಟರು ಬಸವಣ್ಣ. ಇಂತಹ ಶ್ರೇಷ್ಠ ವಿಶ್ವ ಮಾನವನನ್ನು ಮಹಿಳೆಯರು, ದಲಿತರು ಎಂದಿಗೂ ಮರೆಯಬಾರದು ಎಂದರು.

ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವರಂತ ಸ್ವಾತಂತ್ರ್ಯ ಹೋರಾಟಗಾರ್ತಿಯರು, ಸುನೀತಾ ವಿಲಿಯಂ, ಕಲ್ಪನಾ ಚಾವ್ಲಾ ರಂತಹ ಗಗನಯಾನಿಗಳು, ರಾಜಕೀಯ ಕ್ಷೇತ್ರದಲ್ಲಿ ಇಂದಿರಾಗಾಂಧಿ ಸೇರಿದಂತೆ ಅನೇಕ ಸಾಧಕಿಯರು ಸಾಧನೆ ಮಾಡಿದ್ದಾರೆ. ಅವರೆಲ್ಲರನ್ನು ಮಹಿಳೆಯರು ಆದರ್ಶವಾಗಿಟ್ಟುಕೊಳ್ಳಬೇಕು. ಗೌರವಾನ್ವಿತರಾಗಿ ಸಮಾಜದಲ್ಲಿ ಬದುಕುವ ಸಮಾನ ಹಕ್ಕು ಪಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಈ ಹಿಂದೆ ಧರ್ಮ ಕೇವಲ ಕೆಲವರ ಸ್ವತ್ತಾಗಿತ್ತು. ಈ ಧೋರಣೆಯನ್ನು ಸರಿಪಡಿಸಿ ಸಾಮಾಜಿಕ ಸುಧಾರಣೆ ತಂದವರು ಬಸವಣ್ಣ ಎಂದರಲ್ಲದೇ, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಶೇ.33 ರಷ್ಟು ಮೀಸಲಾತಿ ನೀಡಬೇಕೆಂಬ ಕೂಗು ತುಂಬಾ ವರ್ಷಗಳದ್ದು, ಆದರೂ ಈ ಕೂಗು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಮಹಿಳೆಯರಿಗೆ ಸ್ಥಾನಮಾನ ದೊರೆತಷ್ಟು ವಿಧಾನಸಭೆ, ಪಾರ್ಲಿಮೆಂಟ್ ಅಸೆಂಬ್ಲಿಗಳಲ್ಲಿ ದೊರೆಯುತ್ತಿಲ್ಲ. ಈ ಬಗ್ಗೆ ಮಹಿಳೆಯರು ಜಾಗೃತರಾಗಬೇಕು. ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂದರು.

Advertisement

ಇದೇ ವೇಳೆ ಈಚೆಗೆ ಡಾಕ್ಟರೇಟ್ ಪಡೆದ ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ, ನ್ಯಾಯವಾದಿಗಳಾದ ರೇವಣ್ಣ ಬಳ್ಳಾರಿ, ಎಸ್‌.ಎಚ್. ವಿನಯ್‌ಕುಮಾರ್‌ ಸಾಹುಕಾರ್‌ ಅವರಿಗೆ ಸನ್ಮಾನಿಸಲಾಯಿತು. ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ| ಸುಶೀಲಮ್ಮ, ಶಿಕ್ಷಕಿ ಗೀತಾ, ಎ.ಬಿ.ರುದ್ರಮ್ಮ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಹಾಗೂ ಪತ್ರಿಕಾ ಏಜೆಂಟ್ ಗಿರೀಶ್‌, ಬೇರ್ಯ ರಾಮ್‌ಕುಮಾರ್‌, ರೋಷನ್‌, ಸಂಗಪ್ಪ ತೋಟದ್‌, ಪ್ರಭುಲಿಂಗಪ್ಪ ಇತರರಿಗೆ ಕಾಯಕ ಯೋಗಿ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಕವಿಗೋಷ್ಠಿ ನಡೆಯಿತು.

ತಾವರಕೆರೆ ಶಿಲಾಮಠದ ಡಾ| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ರೇವಣ್ಣ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಮಹಾಂತೇಶ್‌ ನಿಟ್ಟೂರ್‌, ಬಿ.ಕೆ. ಚೆಲುವಾಂಬಿಕಾ, ಇಂಧುದರ್‌ ನಿಶಾನಿಮಠ್, ಎನ್‌.ಜೆ . ಶಿವಕುಮಾರ್‌, ಶರಣಪ್ಪ ಕೋಗಲೂರು ಇತರರು ಉಪಸ್ಥಿತರಿದ್ದರು.

ಬಸವ ಜಯಂತಿಗೆ ದಾವಣಗೆರೆ ನಂಟು
1913ರಲ್ಲಿ ದಾವಣಗೆರೆಯಲ್ಲಿ ಪ್ರಪ್ರಥಮವಾಗಿ ಸಾರ್ವಜನಿಕ ಬಸವ ಜಯಂತಿ ಆಚರಣೆ ಆರಂಭವಾಯಿತು. 1983ರಲ್ಲಿ ಬಸವ ಜಯಂತಿ ದಿನವನ್ನು ಸರ್ಕಾರದಿಂದ ರಜಾ ದಿನವಾಗಿ ಘೋಷಣೆ ಮಾಡಿದ ಕೀರ್ತಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್‌ ಅವರಿಗೆ ಸಲ್ಲುತ್ತದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕುವಂತೆ ಆದೇಶಿಸಿದ ಶ್ರೇಷ್ಠತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು. ಜೊತೆಗೆ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ತಂದಿದ್ದರಿಂದ ಕೂಡಲಸಂಗಮ ಸೇರಿದಂತೆ ಅನೇಕ ಶರಣರ ಕೇಂದ್ರಗಳು ಇಂದು ಪವಿತ್ರ ಪ್ರಕ್ಷಣೀಯ ಸ್ಥಳವನ್ನಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಶ್ರೀ ಡಾ| ಗುರುಬಸವ ಸ್ವಾಮೀಜಿ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next