Advertisement

ವಿಜಯೇಂದ್ರ ರಾಜಕಾರಣಕ್ಕೆ ಹಾನಗಲ್ಲ ಬುನಾದಿ?

06:12 PM Jul 27, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಇತ್ತ ಹಾವೇರಿ ಜಿಲ್ಲೆಯ ರಾಜಕಾರಣದಲ್ಲಿಯೂ ಭಾರೀ ಸಂಚಲನ ಶುರುವಾಗಿದೆ. ಅವರ ರಾಜ್ಯ ರಾಜಕೀಯದ ವಾರಸುದಾರರಾಗಿ ಪುತ್ರ ವಿಜಯೇಂದ್ರ ಹಾನಗಲ್ಲ ಕ್ಷೇತ್ರದ ಮೂಲಕ ಅಧಿಕಾರ ರಾಜಕಾರಣಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಬಂದಾಗ ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್‌ನೊಂದಿಗೆ ಕೆಲ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆ ಪ್ರಕಾರ ಪುತ್ರ ವಿಜಯೇಂದ್ರ ಅವರಿಗೆ ಸಿ.ಎಂ. ಉದಾಸಿ ನಿಧನಾನಂತರ ತೆರವಾಗಿರುವ ಹಾನಗಲ್ಲ ವಿಧಾನಸಭೆ ಕ್ಷೇತ್ರದ ಟಿಕೆಟ್‌ ನೀಡಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು. ಬಳಿಕ ಅವರಿಗೆ ಉಪಮುಖ್ಯಮಂತ್ರಿ ಇಲ್ಲವೇ ಕ್ಯಾಬಿನೆಟ್‌ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂಬ ಮಾತುಕತೆ ಆಗಿದೆ. ಇದರ ಪ್ರಕಾರ ವಿಜಯೇಂದ್ರ ಹಾನಗಲ್ಲ ಕ್ಷೇತ್ರದಿಂದ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಪಕ್ಷದ ಮುಖಂಡರಿಂದಲೇ ಕೇಳಿಬರುತ್ತಿದೆ. ಹೀಗಾಗಿ ಹಾವೇರಿ ರಾಜಕಾರಣ ಮತ್ತೆ ಗರಿಗೆದರಿದೆ.

ಹಾವೇರಿ ಪ್ರೀತಿ: ಯಡಿಯೂರಪ್ಪ ಅವರಿಗೆ ಮೊದಲಿನಿಂದಲೂ ಹಾವೇರಿ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧವಿದೆ. ಜಿಲ್ಲೆಯಲ್ಲಿ ಯಡಿಯೂರಪ್ಪ ಬೆಂಬಲಿಗ ಶಾಸಕರು, ಮುಖಂಡರ ಪ್ರಭಾವವೂ ಬಲಿಷ್ಠವಾಗಿದೆ. ಇನ್ನು ಹಾನಗಲ್ಲ ಕ್ಷೇತ್ರ ಶಿವಮೊಗ್ಗದ ಗಡಿ ಕ್ಷೇತ್ರವೂ ಆಗಿದೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರು ಈ ಹಿಂದೆ ಬಿಜೆಪಿಯಿಂದ ಹೊರಬಂದಾಗ ಹಾವೇರಿ ಜಿಲ್ಲೆಯಿಂದಲೇ ತಮ್ಮ ಕರ್ನಾಟಕ ಜನತಾ ಪಕ್ಷಕ್ಕೆ ಚಾಲನೆ ನೀಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಪುತ್ರ ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಹಾನಗಲ್ಲ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಲು ಬಯಸಿದ್ದಾರೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್‌ ಮನವೊಲಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿರೋಧದ ಸಾಧ್ಯತೆ ಕಡಿಮೆ: ಇನ್ನು ಹಾನಗಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಸಿ.ಎಂ. ಉದಾಸಿ ಬಳಿಕ ಅವರ ಸ್ಥಾನ ತುಂಬಬಹುದಾದ ಮೊದಲನೇ ಹಂತದ ಪ್ರಬಲ ನಾಯಕರು ಪಕ್ಷದಲ್ಲಿಲ್ಲ. ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಒಂದು ಡಜನ್‌ ಮೀರಿದ್ದರೂ ಅವರ್ಯಾರೂ ಹೆಚ್ಚಿನ ವರ್ಚಸ್ಸು ಹೊಂದಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿದರೆ ಸ್ಥಳೀಯವಾಗಿ ಪ್ರಬಲ ವಿರೋಧ ಎದುರಾಗದು.

Advertisement

ಇನ್ನು ಸಿ.ಎಂ. ಉದಾಸಿಯವರ ಕುಟುಂಬದಲ್ಲಿಯೇ ಒಬ್ಬರಿಗೆ ಟಿಕೆಟ್‌ ಕೊಡುವ ಬಗ್ಗೆ ಚರ್ಚೆ ನಡೆದರೆ, ಸಂಸದ ಶಿವಕುಮಾರ್‌ ಉದಾಸಿಯವರ ಪತ್ನಿ ರೇವತಿ ಹೆಸರು ಪ್ರಸ್ತಾಪವಾಗಬಹುದು. ಆದರೆ ವಿಜಯೇಂದ್ರ ಕ್ಷೇತ್ರಕ್ಕೆ ಬರುತ್ತಾರೆಂದರೆ ಉದಾಸಿ ಕುಟುಂಬದಿಂದಲೂ ವಿರೋಧ ಎದುರಾಗಲಾರದು.

ಆದ್ದರಿಂದ ಯಡಿಯೂರಪ್ಪ ಅವರು ತಾವು ಶಾಸಕ ಸ್ಥಾನದಲ್ಲಿರುವಾಗಲೇ ಪುತ್ರ ವಿಜಯೇಂದ್ರ ಅವರಿಗೆ ಅಧಿಕಾರ ರಾಜಕಾರಣದಲ್ಲಿ ತರಲು ಹಾನಗಲ್‌ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಜಿಲ್ಲೆಯ ರಾಜಕೀಯ ವಿಶ್ಲೇಷಕರು. ಹೀಗಾಗಿ ಬಿಜೆಪಿ ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next