ದಾವಣಗೆರೆ: ದಾವಣಗೆರೆಯಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ ರಣಜಿ ಒಳಗೊಂಡಂತೆ ಇತರೆ ಪಂದ್ಯಗಳು ನಡೆಯುವಂತಹ ಅತ್ಯಂತ ಸುಸಜ್ಜಿತ ಟರ್ಫ್ ಪಿಚ್ ಸಿದ್ಧವಾಗಲಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಜರ್ ಬಿನ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ದಾವಣಗೆರೆಯ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ತುಮಕೂರು ವಲಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ 1992ರ ನಂತರ ರಣಜಿ ಪಂದ್ಯ ನಡೆದಿಲ್ಲ ಎಂಬುದು ಗಮನದಲ್ಲಿದೆ. ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿರುವ ನಿವೇಶನದ ಸುತ್ತ ಕಾಂಪೌಂಡ್ ನಿರ್ಮಾಣ, ಮ್ಯಾಟ್ ಪಿಚ್ ಸಿದ್ಧಪಡಿಸಿದ ನಂತರ ಮುಂದೆ ಟರ್ಫ್ ಪಿಚ್ ಸಿದ್ಧಪಡಿಸಲಾಗುವುದು. ಒಂದೂವರೆ ವರ್ಷದಲ್ಲಿ ಪಂದ್ಯ ನಡೆಸುವಂತೆ ಅಭಿವೃದ್ಧಿಪಡಿಸಲಾಗುವುದು. ದಾವಣಗೆರೆಯಲ್ಲಿ ಕೆಪಿಎಲ್ ಆಯೋಜಿಸುವ ಚಿಂತನೆಯೂ ಇದೆ ಎಂದು ತಿಳಿಸಿದರು.
ನಾವು ರಣಜಿ ಪ್ರವೇಶಿಸಿದ ದಿನಗಳಲ್ಲಿ ಮ್ಯಾಟ್ ಪಿಚ್ ಗಳಲ್ಲಿ ಪಂದ್ಯಗಳನ್ನ ಆಡಿದ್ದೇವೆ. ಈಗ ಟರ್ಫ್ ಪಿಚ್ ಮೇಲೆಯೇ ಆಟ ಡೆಸಬೇಕಾಗಿದೆ. ಪ್ರಾಥಮಿಕ ಹಂತದಿಂದಲೇ ಟರ್ಫ್ ಪಿಚ್‌ನಲ್ಲಿ ಆಡುವುದು ಮುಂದೆ ಎಲ್ಲಾ ಹಂತಗಳಲ್ಲಿ ಆಟಗಾರರಿಗೆ ನೆರವಾಗಲಿದೆ. ಹಾಗಾಗಿಯೇ ರಾಜ್ಯ ಕ್ರಿಕೆಟ್ ಸಂಸ್ಥೆ ಟರ್ಫ್ ಪಿಚ್, ಕ್ಲಬ್ ಹೌಸ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ, ಗಮನ ನೀಡುತ್ತಿದೆ. ದಾವಣಗೆರೆ ನಂತರ ಗದಗದಲ್ಲಿಯೂ ಟರ್ಫ್ ಪಿಚ್, ಕ್ಲಬ್‌ಹೌಸ್ ಸಿದ್ದಪಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಕ್ರಿಕೆಟ್ ಸಂಸ್ಥೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ಅತ್ಯಾಧುನಿಕ ಸೌಲಭ್ಯ, ಜಿಲ್ಲಾವಾರು, ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿ ಆಯೋಜನೆ, ಬೆಂಗಳೂರು ಕ್ರಿಕೆಟ್ ಅಕಾಡೆಮಿ ಮಾದರಿಯಲ್ಲಿ ಎಲ್ಲಾ ಕಡೆ ಅಕಾಡೆಮಿ, ಕೋಚರ್‌ಗಳ ತರಬೇತಿ, ಬೆಂಗಳೂರಿನಲ್ಲಿ ಎನ್‌ಸಿಎ ಮಾದರಿ ಉಚಿತವಾಗಿ ಬೇಸಿಗೆ ಶಿಬಿರ ನಡೆಸುವುದು ಒಳಗೊಂಡಂತೆ ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಹಲವಾರು ರಚನಾತ್ಮಕ ಕಾರ್ಯಕ್ರಮ, ಯೋಜನೆ ಹೊಂದಿದೆ ಎಂದು ತಿಳಿಸಿದರು. ಶಾಲಾ ಮಟ್ಟದಲ್ಲಿ ಕ್ರಿಕೆಟ್‌ಗೆ ಉತ್ತೇಜನ ನೀಡಲು ರಾಜ್ಯ ಕ್ರಿಕೆಟ್ ಸಂಸ್ಥೆ ಸದಾ ಬದ್ಧವಾಗಿದೆ. ಬೆಂಗಳೂರು ಮಾದರಿಯಲ್ಲಿ ಅನೇಕ ಕಡೆ ಶಾಲೆಗಳಲ್ಲಿ ಮೈದಾನಗಳ ಕೊರತೆ ಇದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಯತ್ನದಿಂದ ಕಳೆದ ಸಾಲಿನ ಬಿ.ಟಿ. ರಾಮಯ್ಯ ಶೀಲ್ಡ್ ಪಂದ್ಯಾವಳಿಯಲ್ಲಿ 130 ಶಾಲೆಗಳು ಭಾಗವಹಿಸಿದ್ದವು ಎಂದು ತಿಳಿಸಿದರು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರವೇ ಸಬ್‌ವೇ ಸಿಸ್ಟಂ ಇದೆ. ಎಷ್ಟೇ ಪ್ರಮಾಣದ ಮಳೆ ಬಂದರೂ 25-30 ನಿಮಿಷದಲ್ಲಿ ಆಟ ಪ್ರಾರಂಭಿಸುವಂತಹ ಅತ್ಯಾಧುನಿಕ ವ್ಯವಸ್ಥೆಯ ಸಬ್‌ವೇ ಇದೆ. ಇನ್ನೂ ಹೆಚ್ಚಿನ ಅತ್ಯಾಧುನಿಕ ಸೌಲಭ್ಯ ಒದಗಿಸುವ ಚಿಂತನೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯ ಕ್ರಿಕೆಟ್ ಸಂಸ್ಥೆ ಮಹಿಳಾ ಕ್ರಿಕೆಟ್‌ಗೆ ಸಾಕಷ್ಟು ಅನುದಾನ ನೀಡುತ್ತಿದೆ. ದಿನ ದಿನಗಳಲ್ಲಿ ಕರ್ನಾಟಕ ಮಹಿಳಾ ತಂಡ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಗಿ ಹೊರ ಹೊಮ್ಮಲಿದೆ.
ಅಷ್ಟೊಂದು ಪ್ರತಿಭಾವಂತ ಆಟಗಾರ್ತಿಯರು ನಮ್ಮಲ್ಲಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಗಮನ ನೀಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷ ಜೆ. ಅಭಿರಾಂ, ತುಮಕೂರು ವಲಯ ಅಧ್ಯಕ್ಷ ಮೋಹನ್‌ರಾಜ್, ಸಂಚಾಲಕ ಕೆ. ಶಶಿಧರ್, ಡಾ| ಜಯರಾಮ್ ಸುದ್ದಿಗೋಷ್ಠಿಯಲ್ಲಿದ್ದರು.