ದಾವಣಗೆರೆ: ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕ್ಷೇತ್ರಕ್ಕಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಹೆಚ್ಚು ಆದ್ಯತೆ ನೀಡಲು ಮಕ್ಕಳಲ್ಲಿ ಮೋಷಕರು ಆಸಕ್ತಿ ಮೂಡಿಸಲು ಮುಂದಾಗಬೇಕೆಂದು ಹಿರಿಯ ಸಾಹಿತಿ ಡಾ| ನಾ. ಸೋಮೇಶ್ವರ ಹೇಳಿದ್ದಾರೆ.
ಶನಿವಾರ, ನಗರದ ಶ್ರೀರೇಣುಕಾ ಮಂದಿರದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ್ದ ಕನ್ನಡ ಕುವರ-ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಮಾತನಾಡಿದ ಅವರು, ಭಾರತದಲ್ಲಿ ಪ್ರತಿ ವರ್ಷ 16 ಲಕ್ಷ ಮಂದಿ ಇಂಜಿನಿಯರಿಂಗ್ ಪದವಿ ಗಳಿಸುತ್ತಾರೆ. ಅವರಲ್ಲಿ ಒಂದು ಲಕ್ಷ ಮಂದಿಗೆ ಮಾತ್ರ ಉದ್ಯೋಗ ಸಿಗಲಿದೆ. ಬಾಕಿ 15 ಲಕ್ಷ ಇಂಜಿನಿಯರಿಂಗ್ ಪದವೀಧರರು ಕೆಲಸ ಸಿಗದೇ ಪರಿತಪಿಸಬೇಕಾಗುತ್ತದೆ ಎಂದರು.
ಇಂದು ಅರ್ಥ ಮಾಡಿಕೊಂಡು ಓದುವವರ ಸಂಖ್ಯೆ ಬಹಳ ಕಡಿಮೆ. ನಮ್ಮ ಮಕ್ಕಳಿಗೆ ಐಎಎಸ್ ಅಧಿಕಾರಿಯಾಗುವ ಎಲ್ಲಾ ಅರ್ಹತೆ ಇದೆ. ನಮ್ಮ ರಾಜ್ಯದ ಮಕ್ಕಳಲ್ಲಿ ಬುದ್ದಿವಂತಿಕೆ, ಯೋಗ್ಯತೆ, ತಾಳ್ಮೆ ಇದೆ. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ನಮ್ಮ ರಾಜ್ಯದ ಮಕ್ಕಳು ಹೆಸರಿಗಷ್ಟೇ ಪದವಿ ಪಡೆಯುತ್ತಾರೆ. ದೇಶದಲ್ಲಿ 50ಕ್ಕೂ ಹೆಚ್ಚು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ. ಹಾಗಾಗಿ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಲೋಚಿಸಬೇಕು. ಕೇವಲ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ಸಿಮೀತವಾಗದೇ ಅದಕ್ಕಿಂತ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಒಲವು ಹೊಂದಬೇಕು. ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇದೆ. ಕೊಡಗಿನವರು ಸೇನೆಗೆ ಹೆಚ್ಚಾಗಿ ಸೇರುತ್ತಾರೆ. ಬಾಕಿ ಭಾಗದಲ್ಲಿ ಸೇನೆಗೆ ಸೇರುವವರ ಸಂಖ್ಯೆ ವಿರಳ. ಮಿಲಿಟರಿ ಸೇರಿದರೆ ಸಾಯುತ್ತಾರೆ ಎಂಬ ಮನೋಧೋರಣೆ ಬರಬಾರದು. ದೇಶ ರಕ್ಷಣೆಗೆ ನಮ್ಮ ಮಕ್ಕಳು ಇದ್ದಾರೆ ಎಂಬ ಹೆಮ್ಮೆಯ ಭಾವನೆ ಮೂಡಬೇಕಿದೆ ಎಂದು ಅವರು ಹೇಳಿದರು.
ಕನ್ನಡ ವಿಷಯದಲ್ಲಿ 125ಕ್ಕೆ 120ರ ವರೆಗೆ ಅಂಕ ಪಡೆದ ಮಕ್ಕಳಿಗೆ ಕನ್ನಡ ಕುವರ-ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.
ಯಕ್ಷರಂಗದ ಅಧ್ಯಕ್ಷ ಮಲ್ಲಾಡಿ ಪ್ರಭಾಕರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ. ಎಸ್.ಎಸ್.ಹಿರೇಮಠ, ಸಾಲಿಗ್ರಾಮ ಗಣೇಶ್ ಶೆಣೈ, ಜಿ.ವಿ.ಲೋಕೇಶ್, ವಿಜಯಕುಮಾರ್ ಶೆಟ್ಟಿ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.