ದಾವಣಗೆರೆ: ಹಿಂದೊಮ್ಮೆ ಹೆಚ್ಚು ಆದಾಯ ಗಳಿಸುತ್ತಿದ್ದಂತಹ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಈಗ ದೈನಂದಿನ ವೆಚ್ಚ ಭರಿಸುವುದು ಹೇಗೆ ಎಂಬ ಚಿಂತೆ ಮಾಡುವಂತಹ ಸ್ಥಿತಿಗೆ ಬಂದು ತಲುಪಿವೆ!
ಹೌದು, ಕಳೆದ ಆಗಸ್ಟ್‌ನಿಂದ ಈಚೆಗೆ ಸರ್ಕಾರ ಮಾರುಕಟ್ಟೆ ಶುಲ್ಕ ವಸೂಲಾತಿಗೆ ಹಾಕಿರುವ ನಿರ್ಬಂಧದ ಪರಿಣಾಮ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೂಲ ಆದಾಯ ದಿನ ಕ್ರಮೇಣ ಕಡಿಮೆ ಆಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಪರಿಣಾಮ ಮಾರುಕಟ್ಟೆ, ಉಪ ಮಾರುಕಟ್ಟೆಯ ಪ್ರಾಂಗಣದ ಒಳಗೆ ನಡೆಯುವಂತ ವಹಿವಾಟುಗೆ ಮಾತ್ರವೇ ಮಾರುಕಟ್ಟೆ ಶುಲ್ಕ ವಸೂಲು ಮಾಡಬೇಕಾಗಿದೆ.
ಮಾರುಕಟ್ಟೆ ಪ್ರಾಗಂಣದ ಹೊರ ಭಾಗದಲ್ಲಿ ನಡೆಯುವ ಯಾವುದೇ ವಹಿವಾಟಿಗೆ ಶುಲ್ಕ ವಿಧಿಸುವಂತೆಯೇ ಇಲ್ಲ. ಹಾಗಾಗಿ ಪ್ರತಿ ನಿತ್ಯ ನಡೆಯುವ ವಹಿವಾಟಿನಿಂದ ಸಂಗ್ರಹವಾಗುತ್ತಿದ್ದ ಮಾರುಕಟ್ಟೆ ಶುಲ್ಕ ಖೋತಾ ಆಗುತ್ತಿರುವ ಪರಿಣಾಮ ಕೃಷಿ ಉತ್ಪನ್ನ ಮಾರುಕಟ್ಟೆಗಳ ದಿನವಹಿ ನಿರ್ವಹಣಾ ವೆಚ್ಚದ ಮೇಲೂ ಪರಿಣಾಮ ಉಂಟಾಗುತ್ತಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳು ಇತಿಹಾಸ ಪುಟ ಸೇರಿದರೂ ಅಚ್ಚರಿ ಪಡಬೇಕಾಗಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ.
ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಳೆದ ವರ್ಷಗಳಲ್ಲಿ 14 ಕೋಟಿಯಷ್ಟು ಮಾರುಕಟ್ಟೆ ಶುಲ್ಕ ಸಂಗ್ರಹದ ಗುರಿ ನಿಗದಿಪಡಿಸಲಾಗುತ್ತಿತ್ತು. ಅದೇ ರೀತಿ ಶುಲ್ಕದ ವಸೂಲಾತಿಯೂ ನಡೆಯುತ್ತಿತ್ತು. ದಾವಣಗೆರೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣು ಇತರೆ ವಹಿವಾಟು ಪ್ರಾಂಗಣದ ಒಳಗೆ ನಡೆಯುತ್ತಿರುವುದರಿಂದ ಶುಲ್ಕ ವಸೂಲಾತಿ ಸಮಾಧಾನಕರವಾಗಿದೆ. ಆದರೆ, ಜಗಳೂರಿನಂತಹ ಮಾರುಕಟ್ಟೆಯಲ್ಲಿ ಶುಲ್ಕ ವಸೂಲಾತಿ ಆತಂಕ ಮೂಡಿಸುವಂತೆ ಇದೆ.
ಈ ಬಾರಿಯ ಜನವರಿಯಲ್ಲಿ ಕೇವಲ 8,207 ರೂ. ಶುಲ್ಕ ಸಂಗ್ರಹವಾಗಿದೆ. ಹೊನ್ನಾಳಿ, ಹರಿಹರ ಮಾರುಕಟ್ಟೆ ಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೆಕ್ಷನ್ 8 ರ ಪ್ರಕಾರ ಮಾರುಕಟ್ಟೆ ಪ್ರಾಂಗಣದ ಹೊರಗೆ ವಹಿವಾಟು ನಡೆಸಿದರೂ ಶುಲ್ಕ ವಸೂಲಾತಿ ಮಾಡುವ ಅವಕಾಶ ಇತ್ತು. ಆದರೆ, ಕಳೆದ ಆಗಸ್ಟ್ ನಿಂದ ಶುಲ್ಕ ವಸೂಲಿ ಮಾಡುವಂತಿಲ್ಲ. ಕೃಷಿ ಮಾರುಕಟ್ಟೆ ಪ್ರಾಗಂಣದ ಹೊರಗೆ ವಹಿವಾಟು ನಡೆಸಬೇಕಾದರೂ ಪರವಾನಿಗೆ ಪಡೆಯುವ ಜೊತೆಗೆ ಶುಲ್ಕ ಪಾವತಿ ಮಾಡಬೇಕಾಗುತಿತ್ತು. ಈಗ ಮುಕ್ತ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಪರವಾನಿಗೆ ಅವಶ್ಯಕತೆಯೂ ಇಲ್ಲ. ಶುಲ್ಕವನ್ನು ಪಾವತಿಸುವಂತಿಲ್ಲ.
ಮಾರುಕಟ್ಟೆ ಶುಲ್ಕ ವಸೂಲಾತಿ ಆಧಾರದಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ಛತೆ,ಖರೀದಿ ಕೇಂದ್ರ ಪ್ರಾರಂಭಿಸಿದಲ್ಲಿ ಆಗತ್ಯ ಸೌಲಭ್ಯ, ದೂರವಾಣಿ, ಭದ್ರತಾ ಸಿಬ್ಬಂದಿ ವೆಚ್ಚ ಭರಿಸಲಿಕ್ಕೆ ಸಾಧ್ಯವಾಗುತ್ತಿತ್ತು. ಈಗ ತೊಂದರೆ ಆಗುತ್ತಿದೆ. ಕೆಲವಾರು ಮಾರುಕಟ್ಟೆಯಲ್ಲಿ ಶೇ.50 ರಷ್ಟು ಸಿಬ್ಬಂದಿ ಕಡಿತ ಮಾಡಲಾಗುತ್ತಿದೆ. ಐದಾರು ಜನರು ಮಾಡಬೇಕಾದ ಕೆಲಸವನ್ನು ಇಬ್ಬರು ಮಾತ್ರ ಮಾಡಿಕೊಂಡು ಹೋಗುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಚ್ಚಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವುದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಾಗುತ್ತಿರುವ ದಾರುಣ ಪರಿಸ್ಥಿತಿಗೆ ಕೈಗನ್ನಡಿ.
ರಾ. ರವಿಬಾಬು