Advertisement

ವೀರಶೈವ-ಲಿಂಗಾಯತ ಎಂದಿಗೂ ಒಂದೇ

10:29 AM Aug 26, 2019 | Naveen |

ದಾವಣಗೆರೆ: ವೀರಶೈವ-ಲಿಂಗಾಯತ ಎಂದೆಂದಿಗೂ ಒಂದೇ. ಹಾಗಾಗಿ ವೀರಶೈವ-ಲಿಂಗಾಯತರು ಒಳ ಪಂಗಡಗಳನ್ನು ವಿಲೀನಗೊಳಿಸುವ ಮೂಲಕ ಒಂದಾಗುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ| ಅಭಿನವ ಅನ್ನದಾನ ಸ್ವಾಮೀಜಿ ತಿಳಿಸಿದರು.

Advertisement

ದೇವರಾಜ ಅರಸು ಬಡಾವಣೆಯ ಅನ್ನದಾನೇಶ್ವರ ಶಾಖಾ ಮಠದಲ್ಲಿ ಭಾನುವಾರ ಶ್ರೀಗುರು ಅನ್ನದಾನ ಮಹಾಶಿವಯೋಗಿಗಳವರ 42ನೇ ಪುಣ್ಯಾರಾಧನೆ, 228ನೇ ಶಿವಾನುಭವ ಸಂಪದ, 501 ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಎರಡೂ ಒಂದೇಯಾಗಿದೆ. ಎಂದೂ ಬೇರೆ, ಬೇರೆಯಲ್ಲ ಎಂದು ಪ್ರತಿಪಾದಿಸಿದರು.

ಇತ್ತೀಚೆಗೆ ಕೆಲ ಮಹಾ ಪಂಡಿತರು ಲಿಂಗಾಯತವೇ ಬೇರೆ ಧರ್ಮ ಎಂದು ಪ್ರತ್ಯೇಕ ಧರ್ಮದ ಮಾನ್ಯತೆಗೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಮಾನ್ಯತೆ ನೀಡಲ್ಲ. ಏಕೆಂದರೆ, ಹಿಂದೂ ಧರ್ಮ ಬಿಟ್ಟು ಬೇರೆ ಧರ್ಮ ಹುಟ್ಟುತ್ತೆ ಎಂದಾದರೆ ಕೇಂದ್ರ ಸರ್ಕಾರ ಅಷ್ಟು ಆಸ್ಥೆ ತೋರುವುದಿಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ವೀರಶೈವ-ಲಿಂಗಾಯತರು ಒಳ ಪಂಗಡಗಳನ್ನು ವಿಲೀನಗೊಳಿಸುವ ಮೂಲಕ ಒಂದಾಗುವ ವಿಶಾಲ ಮನೋಭಾವ ಬೆಳೆಸಿಕೊಳ್ಳುವವರೆಗೆ ಸ್ವತಂತ್ರ ಧರ್ಮದ ಸ್ಥಾನಮಾನ ಸಿಗುವುದಿಲ್ಲ. ಒಂದಾಗುವ ಪ್ರಯತ್ನವನ್ನೇ ಮಾಡದಿದ್ದರೆ, ವೀರಶೈವ -ಲಿಂಗಾಯತ ಧರ್ಮದ ಸಮಗ್ರತೆಗೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿದರು.

ವೀರಶೈವ-ಲಿಂಗಾಯತ ಎರಡೂ ಒಂದೇ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೋರಾಟ ಅಪಾರ. ಕಾಂಗ್ರೆಸ್‌ ಸರ್ಕಾರವೇ ಲಿಂಗಾಯತರು ಬೇರೆ ಎಂಬುದಾಗಿ ಪ್ರತಿಪಾದಿಸಿತ್ತಾದರೂ ಶಾಮನೂರು ಶಿವಶಂಕರಪ್ಪ ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಗಟ್ಟಿ ನಿಲುವು ತಳೆದು ಧರ್ಮ ಒಡೆಯಲು ಆಸ್ಪದ ನೀಡಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಅನ್ನದಾನೇಶ‌್ವರ ಮಠಕ್ಕೆ ಲಿಂಗಾಯತಯರ ಜೊತೆ ಜೊತೆಗೆ ಕುರುಬರು, ನಾಯಕರು, ಮುಸಲ್ಮಾನರು ಸೇರಿದಂತೆ ಸರ್ವ ಧರ್ಮಿಯರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಮೊಹರಂ ಹಬ್ಬದಲ್ಲಿ ಅಲ್ಲಾಹ ದೇವರಿಗೆ ಲಿಂಗ ಕಟ್ಟಿದ ಕೀರ್ತಿ ಅನ್ನದಾನ ಶಿವಯೋಗಿಗಳಿಗೆ ಸಲ್ಲುತ್ತದೆ. ಶ್ರೀಮಠ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದೆ ಎಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ| ಬಿ.ಪಿ. ವೀರಭದ್ರಪ್ಪ ಮಾತನಾಡಿ, ಮಹಾನ್‌ ದಾರ್ಶನಿಕ ಬಸವಣ್ಣ ಜಗತ್ತಿನ ಎಲ್ಲ ದೇಶದವರಿಗೆ ದಾರಿದೀಪ. ಪಾಶ್ಚಿಮಾತ್ಯ ರಾಷ್ಟ್ರಗಳು ಸಹ ಅವರ ವಿಚಾರಧಾರೆಯನ್ನು ಪಾಲಿಸಲು ಮುಂದಾಗಿವೆ. ಆದರೆ, ನಾವೇ ಬಸವಣ್ಣನವರ ತತ್ವಗಳನ್ನು ಒಪ್ಪಿ, ಅಪ್ಪಿಕೊಳ್ಳದಿರುವುದು ನಿಜಕ್ಕೂ ದುರಂತ. ಕುವೆಂಪು ವಿಶ್ವವಿದ್ಯಾಲಯದ ಬಸವ ಅಧ್ಯಯನ ಪೀಠದ ಮೂಲಕ ಬಸವಾದಿ ಪ್ರಮಥರು ಹಾಕಿಕೊಟ್ಟಿರುವ ತತ್ವಾದರ್ಶಗಳನ್ನು ಜಗತ್ತಿಗೆ ಸಾರುವ ಕೆಲಸ ಮಾಡಲಾಗುವುದು. ವಿಶ್ವವಿದ್ಯಾಲಯದಲ್ಲಿ ರಾಮರಾಜ್ಯದ ಪರಿಕಲ್ಪನೆಯ ವಾತಾವರಣ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಅನ್ನದಾನೀಶ್ವರ ಕಾಲೇಜಿನ ಉಪನ್ಯಾಸಕ ಎಫ್‌.ಎನ್‌.ಹುಡೇದ್‌ ಉಪನ್ಯಾಸ ನೀಡಿದರು. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮುಪ್ಪಿನ ಬಸವಲಿಂಗ ದೇವರು, ಸೇವಾಟ್ರಸ್‌ಟ ಅಧ್ಯಕ್ಷ ಅಥಣಿ ಎಸ್‌. ವೀರಣ್ಣ ,ವಿ.ಸಿ.ಪಾಟೀಲ್, ಎನ್‌. ಅಡಿವೆಪ್ಪ, ಗಿರೀಶ, ಪತ್ರಕರ್ತ ವೀರಣ್ಣ ಎಂ. ಭಾವಿ, ಅಮರಯ್ಯ ಗುರುವಿನಮs್, ನಾಗರಾಜ್‌ ಯರಗಲ್ ಇತರರು ಇದ್ದರು.

ಟಿ.ಜೆ.ಜಯರುದ್ರೇಶ್‌, ಡಾ| ಎ.ಕೆ. ರುದ್ರಮುನಿ, ಶಿವಪುತ್ರಪ್ಪ ಸಂಗಪ್ಪ ಸಿಂಗಾಡಿ, ರಾವುತಪ್ಪ ವೀರಭದ್ರಪ್ಪ ತುಂಬರಗುದ್ದಿ ಗೆ ಗೌರವ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಮುತ್ತೈದೆಯರಿಗೆ ಉಡಿ ತುಂಬಲಾಯಿತು.

ವೀರಶೈವ-ಲಿಂಗಾಯತರು ಒಳ ಪಂಗಡಗಳನ್ನು ವಿಲೀನಗೊಳಿಸುವ ಮೂಲಕ ಒಂದಾಗುವ ವಿಶಾಲ ಮನೋಭಾವ ಬೆಳೆಸಿಕೊಳ್ಳುವವರೆಗೆ ಸ್ವತಂತ್ರ ಧರ್ಮದ ಸ್ಥಾನಮಾನ ಸಿಗುವುದಿಲ್ಲ. ಒಂದಾಗುವ ಪ್ರಯತ್ನವನ್ನೇ ಮಾಡದಿದ್ದರೆ, ವೀರಶೈವ-ಲಿಂಗಾಯತ ಧರ್ಮದ ಸಮಗ್ರತೆಗೆ ಧಕ್ಕೆ ಬರಲಿದೆ.
ಡಾ| ಅಭಿನವ ಅನ್ನದಾನ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next