Advertisement

ಅಂಗನವಾಡಿಯಲ್ಲೇ ಎಲ್ಕೆಜಿ-ಯುಕೆಜಿ ಆರಂಭಿಸಿ

10:15 AM Jul 11, 2019 | Naveen |

ದಾವಣಗೆರೆ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭ, ಬಾಕಿ ಇರುವ ಗೌರವ ಧನ ಬಿಡುಗಡೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿಐಟಿಯು) ನೇತೃತ್ವದಲ್ಲಿ ಬುಧವಾರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

6 ವರ್ಷದೊಳಗಿನ ಮಕ್ಕಳಲ್ಲಿ ಶೇ.40 ದೈಹಿಕ, ಶೇ.60 ಮಾನಸಿಕ ಬೆಳವಣಿಗೆ ಹೊಂದುವ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರ, ಪ್ರಾಥಮಿಕ ಆರೋಗ್ಯ ಒದಗಿಸುವ ಮಹತ್ತರ ಉದ್ದೇಶದಿಂದ 1975ರಿಂದ ದೇಶದ್ಯಾಂತ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ರಾಜ್ಯದಲ್ಲಿ 62,580 ಮುಖ್ಯ, 3,331 ಮಿನಿ ಅಂಗನವಾಡಿ ಕೇಂದ್ರದಲ್ಲಿ 23,23,347 ಮೂರು ವರ್ಷದೊಳಗಿನ, 3 ರಿಂದ 6 ವರ್ಷದೊಳಗಿನ 16,40,170 ಮಕ್ಕಳಿದ್ದಾರೆ.

ಈಗ ಸರ್ಕಾರಿ ಶಾಲೆಗಳ ಸಬಲೀಕರಣದ ಹೆಸರಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸುತ್ತಿರುವುದರಿಂದ ಸಹಜವಾಗಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಾರೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖ ಆಗುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ಅಂಗನವಾಡಿ ಕೇಂದ್ರಗಳ ಮೂಲ ಉದ್ದೇಶವೇ ಮೂಲೆಗುಂಪಾಗಲಿದೆ. ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನ ಹೆಚ್ಚಿಸಿದೆ. ಆದರೆ, ಈವರೆಗೆ ಬಿಡುಗಡೆ ಮಾಡಿಲ್ಲ. ಹಲವಾರು ಕಡೆ 3-4 ತಿಂಗಳಿನಿಂದ ಗೌರವಧನ ಬಂದಿಲ್ಲ. ಇದರಿಂದಾಗಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಸರ್ಕಾರ ಕೂಡಲೇ ಬಾಕಿ ಇರುವ ಗೌರವಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ದಿನದಿಂದ ದಿನಕ್ಕೆ ಹೊಸ ಕೆಲಸಗಳು ಸೇರ್ಪಡೆಯಾಗುತ್ತಿವೆ. ಮಾತೃಪೂರ್ಣ ಯೋಜನೆ ಜಾರಿಯ ನಂತರ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳು ಒಳಗೊಂಡಂತೆ ವಿವಿಧ ಹಂತದ ಅಧಿಕಾರಿಗಳು ಭೇಟಿ ನೀಡುವುದರಿಂದ ಅವರಿಗೆ ಉತ್ತರ ನೀಡುವ ಮತ್ತು ಅಗತ್ಯ ದಾಖಲೆ ಒದಗಿಸುವಲ್ಲೇ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತೊಡಗಬೇಕಾಗುವುದರಿಂದ ಕೇಂದ್ರಕ್ಕೆ ಬರುವ ಮಕ್ಕಳ ರಕ್ಷಣೆ, ಆಹಾರ ಒದಗಿಸುವುದಕ್ಕೆ ಕಷ್ಟವಾಗುತ್ತದೆ. ಈ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾದಂತಹ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಸಮಾಜ ಬಯಸುತ್ತಿರುವ ಬದಲಾವಣೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಆಕರ್ಷಣಾ ಕೇಂದ್ರವಾಗಿ ಪರಿವರ್ತಿಸಬೇಕು. ಮಕ್ಕಳ ಪಾಲನೆ ಮತ್ತು ಕಲಿಕಾ ಕೇಂದ್ರಗಳ ಮಾದರಿಯಲ್ಲಿ ಮಾರ್ಪಡಿಸಬೇಕು. ಮಾತೃಪೂರ್ಣ ಯೋಜನೆಯಡಿ ಮೊಟ್ಟೆ ಇತರೆ ಪೌಷ್ಟಿಕ ಆಹಾರ ಒದಗಿಸಲು ಅಗತ್ಯ ಅನುದಾನ ನೀಡಬೇಕು. ಬಾಕಿ ಇರುವ ಅನುದಾನ ಬಿಡುಗಡೆ ಮಾಡುವ ಜೊತೆಗೆ ಹೆಚ್ಚುವರಿ ಸಹಾಯಕಿಯರ ನೇಮಕಾತಿ ಮಾಡಬೇಕು.

ಕಾರ್ಯಕರ್ತೆಯರು, ಸಹಾಯಕಿಯರಿಗೆ ಎನ್‌ಪಿಎಸ್‌ ಮಾನದಂಡ ಅನುಸರಿಸುವುದು, ಇಡುಗಂಟು ಬಿಡುಗಡೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಕೆ.ಎಚ್. ಆನಂದರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next