Advertisement

ಪರ್ಯಾಯ ಬೆಳೆ ಬೆಳೆಯಲು ಸಲಹೆ

04:49 PM Jun 29, 2019 | Naveen |

ದಾವಣಗೆರೆ: ಅತಿಯಾದ ಆಧುನೀಕರಣ ಮತ್ತು ಕೈಗಾರೀಕರಣದಿಂದಾಗಿ ಜಾಗತಿಕ ತಾಪಮಾನ, ಹಸಿರು ಮನೆ ಪರಿಣಾಮ, ಹಸಿರು ಮನೆ ಅನಿಲಗಳು (ಇಂಗಾಲದ ಡೈ ಆಕ್ಸೈಡ್‌, ಮಿಥೇನ್‌ ಹಾಗೂ ನೈಟ್ರೈಟ್ ಆಕ್ಸೈಡ್‌) ಇತ್ಯಾದಿಗಳ ಉತ್ಪಾದನೆ ಪರಿಣಾಮದಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ.

Advertisement

ಹವಾಮಾನ ಬದಲಾವಣೆಯಿಂದ ಸರಾಸರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆಲೀಕಲ್ಲು ಮಳೆ, ಚಂಡಮಾರುತ, ಒಣ ಹವೆ, ತಾಪಮಾನ ಹೆಚ್ಚಾಗುತ್ತಿದೆ. ಇದಕ್ಕೆ ಅನುಗುಣವಾಗಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬಿತ್ತನೆ ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲಿ ಮಳೆಯಾದಲ್ಲಿ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಕೃಷಿ ಇಲಾಖೆ ಸಲಹೆ ನೀಡಿದೆ.

ಜುಲೈ ಮೊದಲನೇ ಮತ್ತು ಎರಡನೇ ವಾರದಲ್ಲಿ ಕೆಂಪು ಮಣ್ಣಿನಲ್ಲಿ 8 ಸಾಲು ಮೆಕ್ಕೆಜೋಳ + 1 ಸಾಲು ತೊಗರಿ, ಎಂಟು ಸಾಲು ರಾಗಿ + 1 ಸಾಲು ಅವರೆ, ಎಂಟು ಸಾಲು ರಾಗಿ + 1 ಸಾಲು ತೊಗರಿ ಬಿತ್ತನೆ ಮಾಡುವುದು. ಕಪ್ಪುಮಣ್ಣಿನಲ್ಲಿ 8 ಸಾಲು ಮೆಕ್ಕೆಜೋಳ + 1 ಸಾಲು ತೊಗರಿ, ಸೂರ್ಯಕಾಂತಿ + ತೊಗರಿ ಮತ್ತು ಸೂರ್ಯಕಾಂತಿ ಬೆಳೆ ಬೆಳೆಯುವುದು.

ಜುಲೈ ಮೂರನೇ ಮತ್ತು ನಾಲ್ಕನೇ ವಾರದಲ್ಲಿ ಕೆಂಪು ಮಣ್ಣಿನಲ್ಲಿ ರಾಗಿ, 6 ಸಾಲು ರಾಗಿ + 1 ಸಾಲು ಹುರುಳಿ, 6 ಸಾಲು ರಾಗಿ + 1 ಸಾಲು ಹುಚ್ಚೆಳ್ಳು ಹಾಗೂ ಸೂರ್ಯಕಾಂತಿ ಬಿತ್ತನೆ ಮಾಡುವುದು. ಬರ ಸಹಿಷ್ಣತೆ ಹೊಂದಿರುವ ಸಿರಿಧಾನ್ಯಗಳಾದ ನವಣೆ, ಸಾಮೆ ಬಿತ್ತನೆ ಮಾಡಬಹುದು. ಕಪ್ಪು ಮಣ್ಣಿನಲ್ಲಿ 8 ಸಾಲು ಮೆಕ್ಕೆಜೋಳ + 1 ಸಾಲು ತೊಗರಿ, ಹರಳು ಮತ್ತು ಸೂರ್ಯಕಾಂತಿ ಬೆಳೆ ಬೆಳೆಯುವುದು.

ಆಗಸ್ಟ್‌ ಮೊದಲನೇ ವಾರದಲ್ಲಿ ಕೆಂಪು ಮಣ್ಣಿನಲ್ಲಿ 6 ಸಾಲು ರಾಗಿ + 1 ಸಾಲು ಹುರುಳಿ, ಸೂರ್ಯಕಾಂತಿ ಹಾಗೂ ಬರ ಸಹಿಷ್ಣತೆ ಹೊಂದಿರುವ ಸಿರಿಧಾನ್ಯಗಳಾದ ನವಣೆ, ಸಾಮೆ ಮತ್ತು ಮೇವಿನ ಮೆಕ್ಕೆಜೋಳ ಬಿತ್ತನೆ ಮಾಡಬಹುದು. ಕಪ್ಪು ಮಣ್ಣಿನಲ್ಲಿ 8 ಸಾಲು ಮೆಕ್ಕೆಜೋಳ + 1 ಸಾಲು ತೊಗರಿ, ಹುರುಳಿ, ಅವರೆ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬೆಳೆಯುವುದು.

Advertisement

ಯಾವ ತಳಿಗಳು: ರಾಗಿ-ಜಿಪಿಯು 48, ಜಿಪಿಯು 28, ಎಂಎಲ್ 365, ತೊಗರಿ- ಬಿಆರ್‌ಜಿ 5,ಅವರೆ-ಎಚ್ಎ 3, ಎಚ್ಎ-4, ಸೂರ್ಯಕಾಂತಿ- ಕೆಬಿಎಸ್‌ಎಚ್ 1, ಹರಳು- ಡಿಸಿಎಸ್‌ 9, ನವಣೆ- ಸಿಯಾ 2644, ಸಾಮೆ- ಕೊ2, ಪಿಆರ್‌ಸಿ 3, ಹುರುಳಿ- ಪಿಎಚ್ಜಿ 9.

ರಾಗಿ, ತೊಗರಿ, ಸೂರ್ಯಕಾಂತಿ, ಹರಳು, ನವಣೆ ಮತ್ತು ಸಾಮೆಯನ್ನು, ಬಿತ್ತನೆ ಮೊದಲು ಬಿತ್ತನೆ ಬೀಜಗಳನ್ನು 18 ಗಂಟೆಗಳು ನೀರಿನಲ್ಲಿ ನೆನೆಸಿ ನಂತರ 24 ಗಂಟೆಗಳು ನೆರಳಿನಲ್ಲಿ ಒಣಗಿಸಿ ನಂತರ ಬಿತ್ತುವುದು.

ರಾಗಿ ಬಿತ್ತನೆ ಮಾಡುವಾಗ ಶೇ.20ರಷ್ಟು ಹೆಚ್ಚಿನ ಬೀಜವನ್ನು ಬಿತ್ತುವುದು ಉದಾಹರಣೆಗೆ ಹೆಕ್ಟರ್‌ಗೆ 10 ಕೆಜಿ ಬಿತ್ತನೆ ಮಾಡುವ ಬದಲು 12 ಕೆಜಿ ಬಿತ್ತನೆ ಮಾಡುವುದು. ಮಧ್ಯಮ ಮತ್ತು ಅಲ್ಪಾವಧಿಯ ತಳಿಗಳನ್ನು ಬಿತ್ತುವುದು. ಮೆಕ್ಕೆಜೋಳದಲ್ಲಿ ಸಾಲಿನಿಂದ ಸಾಲಿಗೆ 1.5 ಅಡಿ ಮತ್ತು ಗಿಡದಿಂದ ಗಿಡಕ್ಕೆ 1 ಅಡಿ ಅಂತರದಲ್ಲಿ ಬಿತ್ತುವುದು. ಸೂರ್ಯಕಾಂತಿ ಬಿತ್ತುವಾಗ ಪ್ರತಿ ಗುಣಿಗೆ ಎರಡು ಬೀಜಗಳಂತೆ ಬಿತ್ತುವುದು.

ಹೆೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next