Advertisement
ನಗರ ಪೊಲೀಸ್ ಉಪಾಧೀಕ್ಷಕ ಎಸ್.ಎಂ. ನಾಗರಾಜ್, ಬಡಾವಣಾ ಪಿಎಸ್‌ಐ ವೀರಬಸಪ್ಪ ಕುಸಲಾಪುರ, ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಪಿಎಸ್‌ಐ ಮಂಜುನಾಥ್ ಅರ್ಜುನ್ ಲಿಂಗಾರೆಡ್ಡಿ ನೇತೃತ್ವದಲ್ಲಿ ಜಯದೇವ ವೃತ್ತ, ಹಳೆ ಬಸ್ ನಿಲ್ದಾಣ ಮತ್ತು ಜಗಳೂರು ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಯದೇವ ವೃತ್ತದಲ್ಲಿ 32, ಜಗಳೂರು ಬಸ್ ನಿಲ್ದಾಣದಲ್ಲಿ 10 ಒಟ್ಟಾರೆ 42 ಆಪೆ ಆಟೋ ವಶಕ್ಕೆ ತೆಗೆದುಕೊಂಡರು.
Related Articles
Advertisement
ಪರ್ಮಿಟ್ಗಿಂತಲೂ ಹೆಚ್ಚಿನ ಸೀಟು ಇದ್ದು ಅಪಘಾತ ಸಂಭವಿಸಿದಲ್ಲಿ ನ್ಯಾಯಾಲಯ ನೀಡುವ ಆದೇಶದಂತೆ ಆಟೋ ಚಾಲಕರು, ಮಾಲಿಕರೇ ದಂಡ ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ 10 ಲಕ್ಷಕ್ಕೂ ಹೆಚ್ಚಿನ ದಂಡ ವಿಧಿಸಿದರೆ ಅಷ್ಟೊಂದು ಕಟ್ಟಲಿಕ್ಕೆ ಕೆಲವರಿಗೆ ಆಗುವುದೇ ಇಲ್ಲ. ಜೀವನ ನಿರ್ವಹಣೆಗೆ ಆಟೋ ಓಡಿಸುವರು ಭಾರೀ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ನಿಯಮಗಳ ಪ್ರಕಾರ 3+1 ಸೀಟು ಮಾತ್ರ ಇರಬೇಕು. ಆದರೆ, ಅನೇಕ ಆಟೋಗಳಲ್ಲಿ ಅದಕ್ಕಿಂತಲೂ ಹೆಚ್ಚಿನ ಸೀಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅದು ನಿಯಮದ ಸ್ಪಷ್ಟ ಉಲ್ಲಂಘನೆ. ಯಾವುದೇ ಕಾರಣಕ್ಕೂ ಹೆಚ್ಚಿನ ಸೀಟು ವ್ಯವಸ್ಥೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಏನಾದರೂ ಹೆಚ್ಚಿನ ಸೀಟು ಇರುವುದು ಕಂಡು ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಅನೇಕ ಆಟೋಗಳಲ್ಲಿ ಚಾಲಕರ ಅಕ್ಕ ಪಕ್ಕ ಎರಡು ಕಡೆ ಸೀಟು ಹಾಕಲಾಗುತ್ತದೆ. ಮುಂದೆ ಅದಕ್ಕೆ ಅವಕಾಶವೇ ನೀಡುವುದಿಲ್ಲ. ಚಾಲಕರ ಅಕ್ಕಪಕ್ಕದ ಸೀಟು ತೆಗೆಸಲಾಗುವುದು. ಆದಾಗ್ಯೂ ಸೀಟು ಹಾಕಿದ್ದು ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಆಟೋಗಳ ಹಿಂಭಾಗದಲ್ಲಿ ಹೆಚ್ಚಿನ ಸೀಟು ಹಾಕುವುದು ತಪ್ಪಿಸಲು ಲಾಕಿಂಗ್ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗುವುದು ಎಂದರು.
ಪ್ರಯಾಣಿಕರು ಸಹ ಆಟೋ ಹತ್ತುವ ಮುನ್ನ ಪರ್ಮಿಟ್ ಇದೆಯೇ ಇಲ್ಲವೇ ಒಳಗೊಂಡಂತೆ ಎಲ್ಲದರ ಬಗ್ಗೆ ಯೋಚನೆ ಮಾಡಬೇಕು. ಐದು ರೂಪಾಯಿ ಉಳಿಸಲು ಹೋಗಿ ಸಮಸ್ಯೆ ಮಾಡಿಕೊಳ್ಳಬಾರದು. ಒಂದೊಮ್ಮೆ ಅಪಘಾತವಾಗಿ ಗಾಯಗೊಂಡಲ್ಲಿ ಇಲ್ಲವೇ ಮರಣ ಹೊಂದಿದಲ್ಲಿ ಪರಿಹಾರವೇ ಸಿಗುವುದಿಲ್ಲ. ಪ್ರಯಾಣಿಕರಂತೆ ಆಟೋ ಚಾಲಕರು, ಮಾಲೀಕರು ಸಹ ತಮ್ಮ ಕುಟುಂಬಗಳ ಬಗ್ಗೆ ಯೋಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀರಾಮ ನಗರ, ಇಂಡಸ್ಟ್ರಿಯಲ್ ಏರಿಯಾಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯ ಕಡಿಮೆ ಇರುವ ಕಾರಣಕ್ಕೆ ಅನಿವಾರ್ಯವಾಗಿ ಆಪೆ ಆಟೋಗಳನ್ನೇ ಅವಲಂಬಿಸಬೇಕಾಗಿದೆ ಎಂಬುದು ಗಮನಕ್ಕೆ ಬಂದಿದೆ. ಹೆಚ್ಚಿನ ಬಸ್ ಸೌಲಭ್ಯ ಒದಗಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳ ಮೂಲಕ ಕೆಎಸ್ಸಾರ್ಟಿಸಿಗೆ ಪತ್ರ ಬರೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆಲವರು ವಾಹನಗಳನ್ನು ಮೊಬೈಲ್ ಹೋಟೆಲ್ನಂತೆ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಅದನ್ನ ಸಹ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಡಾವಣಾ ಪಿಎಸ್‌ಐ ವೀರಬಸಪ್ಪ ಕುಸಲಾಪುರ, ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಪಿಎಸ್‌ಐ ಮಂಜುನಾಥ್ ಅರ್ಜುನ್ ಲಿಂಗಾರೆಡ್ಡಿ ಇದ್ದರು.
ಆಟೋಗಳಲ್ಲಿ 3+1 ಸೀಟುಗಳಿಗೆ ಪರವಾನಿಗೆ ಪಡೆದುಕೊಂಡು ಅದಕ್ಕಿಂತಲೂ ಹೆಚ್ಚಿನ ಸೀಟು ಹಾಕಿಕೊಂಡು ಓಡಾಡುವುದು ತಪ್ಪು. ಒಂದೊಮ್ಮೆ ಯಾವುದೇ ರೀತಿಯ ಅವಘಡ ಸಂಭವಿಸಿದಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸೀಟುಗಳು ಇದ್ದರೆ ಪರಿಹಾರ ನೀಡುವುದು ಕಷ್ಟವಾಗುತ್ತದೆ. ಪ್ರಯಾಣಿಕರ ಸುರಕ್ಷತೆ ಮತ್ತು ಹಿತದೃಷ್ಟಿ ಅತೀ ಮುಖ್ಯ. ಹಾಗಾಗಿ ಈ ಕಾರ್ಯಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ನಿರಂತರವಾಗಿ ಕೈಗೊಳ್ಳಲಾಗುವುದು.•ಎಸ್.ಎಂ. ನಾಗರಾಜ್,
ನಗರ ಪೊಲೀಸ್ ಉಪಾಧೀಕ್ಷಕ.