ದಾವಣಗೆರೆ: ಕೇಂದ್ರ ಸರ್ಕಾರ ಚಿನ್ನದ ಆಭರಣಗಳಿಗೆ ಎಚ್‌ಯುಐಡಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಆ. 23 ರಂದು ದಾವಣಗೆರೆ ಒಳಗೊಂಡಂತೆ ದೇಶದಾದ್ಯಂತ ಚಿನ್ನ, ಬೆಳ್ಳಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ದಿ| ದಾವಣಗೆರೆ ಜ್ಯೂಯಲರ್ ಅಸೋಸಿಯೇಷನ್ ಉಪಾಧ್ಯಕ್ಷ ಆರ್.ಡಿ. ಬದ್ರಿನಾಥ್ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚಿನ್ನದ ಆಭರಣಗಳಿಗೆ ಕಡ್ಡಾಯಗೊಳಿಸಿರುವ ಎಚ್ ಯುಐಡಿಯಿಂದ (ಹಾಲ್‌ಮಾರ್ಕ್ ಯೂನಿಕ್ ಐಡೆಂಟಿಕೇಷನ್ ಡಿಸ್ಕಿಪ್ಷನ್) ಚಿನ್ನ, ಬೆಳ್ಳಿ ವರ್ತಕರು ತೊಂದರೆ ಅನುಭವಿಸಬೇಕಾಗುತ್ತದೆ. ಎಚ್‌ಯುಐಡಿ ರದ್ದುಗೊಳಿಸಬೇಕು ಇಲ್ಲವೇ ಸರಳೀಕಣಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ದೇಶದಾದ್ಯಂತ ಚಿನ್ನ-ಬೆಳ್ಳಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು. ದಾವಣಗೆರೆ ನಗರದಲ್ಲಿ 700ಕ್ಕೂ ಅಧಿಕ ಚಿನ್ನ-ಬೆಳ್ಳಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರ ಚಿನ್ನದ ಆಭರಣಗಳಿಗೆ ಎಚ್‌ಯುಐಡಿ ಕಡ್ಡಾಯ ಮಾಡಿರುವುದರಿಂದ ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಸಾಕಷ್ಟು ಸಮಸ್ಯೆ ಆಗುತ್ತದೆ. ಯಾವುದೇ ಚಿನ್ನ-ಬೆಳ್ಳಿ ಆಭರಣ ತಯಾರಿಸಿ ನೋಂದಣಿ ಹಾಗೂ ಎಚ್‌ಯುಐಡಿ ಮಾಡಿದ ನಂತರ ಯಾವುದೇ ಕಾರಣಕ್ಕೂ ಆಭರಣಗಳ ವಿನ್ಯಾಸ, ತೂಕದಲ್ಲಿ ಬದಲಾವಣೆ ಮಾಡುವಂತೆಯೇ ಇಲ್ಲ. ಗ್ರಾಹಕರು ಏನೇ ಇಷ್ಟಪಟ್ಟರೂ ವ್ಯಾಪಾರಸ್ಥರು ಏನೂ ಮಾಡುವಂತಿಲ್ಲ. ಹಾಗಾಗಿ ಸಾಕಷ್ಟು ಸಮಸ್ಯೆ ಆಗುತ್ತದೆ ಎಂದು ಹೇಳಿದರು. ಎಚ್‌ಯುಐಡಿ ಕಡ್ಡಾಯ ಮಾಡಿರುವುದರಿಂದ ಲೆಕ್ಕಪತ್ರ ಇಡುವುದು, ವ್ಯಾಪಾರ-ವಹಿವಾಟು ನಡೆಸುವುದು ಒಳಗೊಂಡಂತೆ ಸಾಕಷ್ಟು ಪ್ರಾಯೋಗಿಕ ತೊಂದರೆಗಳನ್ನ ಅನುಭವಿಸಬೇಕಾಗುತ್ತದೆ.
ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆಯೆ ನಡೆಯುವಂತಹ ಚಿನ್ನ-ಬೆಳ್ಳಿ ವ್ಯಾಪಾರ ಮುಂದುವರಿಸುವುದಕ್ಕೆ ತೊಂದರೆ ಆಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಚಿನ್ನದ ಆಭರಣಗಳಿಗೆ ಎಚ್‌ಯುಐಡಿ ಕಡ್ಡಾಯಗೊಳಿಸಿರುವುದನ್ನ ಕೈ ಬಿಡಬೇಕು ಇಲ್ಲವೇ ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು. ಚಿನ್ನ-ಬೆಳ್ಳಿ ಆಭರಣಗಳಲ್ಲಿ ತಯಾರಿಕೆ ಒಳಗೊಂಡಂತೆ ಎಲ್ಲ ಹಂತದಲ್ಲಿ ಪಾರದರ್ಶಿಕತೆ, ಪರಿಶುದ್ದತೆ ಕಾಪಾಡಿ ಕೊಳ್ಳುವ ಸರ್ಕಾರದ ಉದ್ದೇಶವನ್ನ ಸ್ವಾಗತಿಸುತ್ತೇವೆ.
ಆದರೆ ಗ್ರಾಹಕರು ಅಪೇಕ್ಷೆ, ಹಣ, ಬೇಡಿಕೆಗೆ ಅನುಗುಣವಾಗಿ ಎಚ್‌ಯುಐಡಿ ಕಡ್ಡಾಯದಿಂದ ವ್ಯಾಪಾರ-ವಹಿವಾಟು ನಡೆಸುವುದು ಕಷ್ಟವಾಗುತ್ತದೆ. ಚಿನ್ನ-ಬೆಳ್ಳಿ ವಹಿವಾಟು ಕ್ಷೇತ್ರದಲ್ಲಿ ಪರಿಶುದ್ಧತೆ, ಪಾರದರ್ಶಿಕತೆ ಬಯಸುವಂತಹ ಸರ್ಕಾರ ರಾಜಸ್ತಾನದ ಕುಂದನ್ ಜ್ಯೂಯಲರಿ, ಝಡಾವ್ ಜ್ಯೂಯಲರಿಗೆ ಎಚ್‌ಯುಐಡಿನಿಂದ ರಿಯಾಯತಿ ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ಸಂಘದ ಗೌರವಾಧ್ಯಕ್ಷ ಶಂಕರ್ ಎನ್. ವಿಠuಲಕರ್, ಅಧ್ಯಕ್ಷ ಅರುಣಾಚಲ ಎನ್. ರೇವಣಕರ್, ನಲ್ಲೂರು ಎಸ್. ರಾಜ್‌ಕುಮಾರ್, ಮಂಜುನಾಥ್ ವರ್ಣೇಕರ್ ಸುದ್ದಿಗೋಷ್ಠಿಯಲ್ಲಿದ್ದರು.