Advertisement

ಬಿಜೆಪಿ ದಲಿತ ವಿರೋಧಿ ಅಲ್ಲವೇ ಅಲ್ಲ

06:44 PM Aug 19, 2021 | Team Udayavani |

ದಾವಣಗೆರೆ: ಬಿಜೆಪಿಯನ್ನು ಬ್ರಾಹ್ಮಣ, ಗರ್ಭಗುಡಿ ರಾಜಕೀಯ ಮಾಡುವ ಪಕ್ಷ ಎಂದು ಕಾಂಗ್ರೆಸ್‌ ಲೇವಡಿ ಮಾಡುತ್ತಿತ್ತು. ಅದೇ ಬಿಜೆಪಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ 20 ಜನರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಮೂಲಕ ಬಿಜೆಪಿ ದಲಿತರು, ಮೀಸಲಾತಿ ವಿರೋಧಿ ಪಕ್ಷ ಅಲ್ಲ ಎಂಬುದನ್ನು ಸಾಧಿಸಿ ತೋರಿಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

Advertisement

ಬುಧವಾರ ಸಂಜೆ ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಸಂವಿಧಾನಕ್ಕೆ ತನ್ನದೇ ಆದ ಇತಿಹಾಸ ಇದೆ. ಸ್ಪೀಕರ್‌, ಸಭಾನಾಯಕ, ವಿಪಕ್ಷ ನಾಯಕ ಸ್ಥಾನಮಾನ ಏನು ಎಂಬುದು ಸಂವಿಧಾನದಲ್ಲಿ ಇದೆ. ಸ್ಪೀಕರ್‌ ಬಂದಾಗ ಎದ್ದು ನಿಂತುಕೊಳ್ಳಬೇಕು. ಸಭಾನಾಯಕ ಉತ್ತರ ನೀಡುವಾಗ ಎಲ್ಲರೂ ಶಾಂತತೆಯಿಂದ ಕೇಳಬೇಕು. ಆದರೆ ಕಾಂಗ್ರೆಸ್‌ ಸಂಸತ್ತಿಗೆ ನೂತನ ಸಚಿವರನ್ನು ಪರಿಚಯಿಸಲೂ ಅವಕಾಶ ಕೊಡಲಿಲ್ಲ. ಹಾಗಾಗಿ ಜನರಿಂದ ಆಯ್ಕೆಯಾಗಿರುವ ನಾವು ಜನರಿಂದ ಆಶೀರ್ವಾದ ಪಡೆಯಲಿಕ್ಕೆ ಜನಾಶೀರ್ವಾದ ಯಾತ್ರೆ ಪ್ರಾರಂಭಿಸಲಾಗಿದೆ ಎಂದರು.

ಕೇಂದ್ರ ಸಂಪುಟದಲ್ಲಿ 23 ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಸಚಿವರಿದ್ದಾರೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಹಿಂದುಳಿದ ವರ್ಗಕ್ಕೆ ಸೇರಿದವರು. ಚುನಾವಣೆಗೆ ಮುಂಚೆಯೇ ಹಿಂದುಳಿದ ವರ್ಗಕ್ಕೆ ಸೇರಿದ ಮೋದಿ ಅವರನ್ನು ಪ್ರಧಾನಮಂತ್ರಿಸ್ಥಾನದ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಬಿಜೆಪಿ ಮೂರನೇ ಎರಡರಷ್ಟು ಬಹುಮತದಿಂದ ಗೆಲುವು ಸಾಧಿಸಿದೆ. ಅದು ಬಿಜೆಪಿಯ ತಾಕತ್ತು ಎಂದು ಬಣ್ಣಿಸಿದರು. ಸಂಸದೀಯ ಪ್ರಜಾಪ್ರಭುತ್ವದ ನಡಾವಳಿಗಳನ್ನು ಉಲ್ಲಂಘಿಸಿದ ಪ್ರತಿಪಕ್ಷಗಳ ಸದಸ್ಯರು, ಸಭಾಧ್ಯಕ್ಷರ ಮುಖಕ್ಕೆ ಪುಸ್ತಕಗಳನ್ನು ಎಸೆದಿವೆ. ಅಧಿ ಕಾರಿಗಳ ಟೇಬಲ್‌ ಮೇಲೆ ಹತ್ತಿ ಕುಣಿದಿದ್ದಾರೆ ಎಂದು ವಿಪಕ್ಷಗಳ ಸದಸ್ಯರ ವರ್ತನೆ ವಿರುದ್ಧ ಹರಿಹಾಯ್ದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಹೊಣೆ ಬಿಜೆಪಿ ಕಾರ್ಯಕರ್ತರದು. ವೃದ್ಧಾಶ್ರಮಕ್ಕೆ ಸೇರುವವರು ಹಾಗೂ ಡಿ ಅಡಿಕ್ಷನ್‌ ಕೇಂದ್ರಗಳ ಮೂಲಕ ನೆರವಾಗಬೇಕಿದೆ. ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಮೂಲಕ ಉದ್ಯೋಗ ಕಲ್ಪಿಸುವ ಹೊಣೆ ಶಾಸಕರ ಮೇಲಿದೆ. ಬಿಜೆಪಿ ಕಾರ್ಯಕರ್ತರು ಮೋದಿ, ಬೊಮ್ಮಾಯಿ, ಯಡಿಯೂರಪ್ಪ ಅವರ ಸರ್ಕಾರದ ಸಾಧನೆ, ಯೋಜನೆ, ಕಾರ್ಯಕ್ರಮಗಳ ಬಗ್ಗೆ ಜನರೊಂದಿಗೆ ಚರ್ಚಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು. ಕೊರೊನಾ ಲಸಿಕೆಗೆ ಮೊದಲಿನಿಂದಲೂ ಕಾಂಗ್ರೆಸ್‌ ಹಾದಿ ಬೀದಿಯಲ್ಲಿ ಅಪಪ್ರಚಾರ ಮಾಡುತ್ತಿದೆ. ನಾವು ಕಿವಿಗೊಡದೆ ಕೆಲಸ ಮಾಡಿದ್ದೇವೆ. ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಕಾಂಗ್ರೆಸ್‌ – ಜೆಡಿಎಸ್‌ಗಳಿಗೆ ಕೆಲಸ ಇಲ್ಲದೇ ಟೀಕಿಸುತ್ತಿವೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಮಾತನಾಡಿ, 2023ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಬೂತ್‌ನಿಂದ ಹಿಡಿದು ಎಲ್ಲ ಕಡೆ ಪಕ್ಷ ಸಂಘಟನೆ ಆಗಬೇಕು. ತಾಲೂಕು ಕೇಂದ್ರಗಳಲ್ಲಿ ಪಕ್ಷದ ಸ್ವಂತ ಕಟ್ಟಡಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಎಲ್ಲಿಯೇ ಕರೆದರೂ ತಾವು ಬಂದು ಪಕ್ಷ ಸಂಘಟನೆಯಲ್ಲಿ ತೊಡಗುವುದಾಗಿ ತಿಳಿಸಿದರು.

Advertisement

ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130-135 ಸ್ಥಾನಗಳಲ್ಲಿ ಗೆಲ್ಲಲು ಪಕ್ಷದ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು ಎಂದರು. ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್‌.ಎ. ರವೀಂದ್ರನಾಥ್‌, ಪ್ರೊ| ಎನ್‌. ಲಿಂಗಣ್ಣ. ಮಾಡಾಳ್‌ ವಿರೂಪಾಕ್ಷಪ್ಪ, ವೈ.ಎ. ನಾರಾಯಣಸ್ವಾಮಿ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಅಣಬೇರು ಜೀವನಮೂರ್ತಿ, ನಂದೀಶ್‌, ನವೀನ್‌, ಶಂಕರಪ್ಪ, ಸುಧಾ ಜಯರುದ್ರೇಶ್‌, ಯಶವಂತರಾವ್‌ ಜಾಧವ್‌ ಇತರರು ಇದ್ದರು. ಜಿಲ್ಲಾ ಅಧ್ಯಕ್ಷ ವೀರೇಶ್‌ ಹನಗವಾಡಿ ಸ್ವಾಗತಿಸಿದರು. ಬಿ.ಎಸ್‌. ಜಗದೀಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next