ದಾವಣಗೆರೆ: ಜಿಲ್ಲಾ ಪಂಚಾಯಿತಿ 2021-22ನೇ ಸಾಲಿನಲ್ಲಿ 354.65 ಕೋಟಿ ರೂ.ಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಜಿಪಂ ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಡಿ 354.65 ಕೋಟಿ ರೂ., ತಾಲೂಕು ಪಂಚಾಯಿತಿ ಕಾರ್ಯಕ್ರಮಗಳಡಿ 716.87 ಕೋಟಿ ರೂ., ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳಡಿ 35 ಲಕ್ಷ ರೂ. ಸೇರಿದಂತೆ ಒಟ್ಟಾರೆ ಈ ವರ್ಷ ಜಿಲ್ಲೆಗೆ 1071.88 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.
ಇದರಲ್ಲಿ ಜಿಪಂ ಕಾರ್ಯಕ್ರಮಗಳಡಿ ನಿಗದಿಪಡಿಸಿರುವ 354.65 ಕೋಟಿ ರೂ. ಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು. ಪ್ರಸಕ್ತ ಸಾಲಿನಲ್ಲಿ 354.65 ಕೋಟಿ ರೂ. ಗಳ ಅನುದಾನವನ್ನು ಹಂಚಿಕೆ ಮಾಡಲು 30 ವಲಯಗಳನ್ನಾಗಿ ನಿಗದಿಪಡಿಸಲಾಗಿತ್ತು. ಹಂಚಿಕೆ ಮಾಡಲಾಗಿರುವ ಅನುದಾನದಲ್ಲಿ ಸಾಮಾನ್ಯ ಶಿಕ್ಷಣ ವಲಯಕ್ಕೆ ಅತಿ ಹೆಚ್ಚು ಅಂದರೆ 160.27 ಕೋಟಿ ರೂ. ಗಳ ಅನುದಾನ (ಶೇ. 45.19) ನಿಗದಿಪಡಿಸಲಾಗಿದೆ. ವೈದ್ಯಕೀಯ ಮತ್ತು ಜನಾರೋಗ್ಯ ವಲಯಕ್ಕೆ 47.32 ಕೋಟಿ ರೂ., ಕುಟುಂಬ ಕಲ್ಯಾಣ-24.52 ಕೋಟಿ, ಪರಿಶಿಷ್ಟ ಜಾತಿ ಕಲ್ಯಾಣ-25.64 ಕೋಟಿ, ಪರಿಶಿಷ್ಟ ಪಂಗಡ ಕಲ್ಯಾಣ-10.72 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ-37.03 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ-2.81 ಕೋಟಿ, ಕೃಷಿ-2.84 ಕೋಟಿ, ತೋಟಗಾರಿಕೆ-4.44 ಕೋಟಿ, ಪಶುಸಂಗೋಪನೆ-4.82 ಕೋಟಿ, ಅರಣ್ಯ-6.68 ಕೋಟಿ, ಗ್ರಾಮೀಣಾಭಿವೃದ್ಧಿ-4.10 ಕೋಟಿ, ಆಯುಷ್-5.15 ಕೋಟಿ, ಲೋಕೋಪಯೋಗಿ ಕಾಮಗಾರಿ-5.62 ಕೋಟಿ, ಮೀನುಗಾರಿಕೆ-1.18 ಕೋಟಿ, ರಸ್ತೆ ಮತ್ತು ಸೇತುವೆ-3.29 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದ್ದು, ಕ್ರಿಯಾ ಯೋಜನೆಗಳಿಗೆ ಸಾಮಾನ್ಯ ಸಭೆ ಅನುಮೋದನೆ ನೀಡಿತು.
ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಗೆ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಡಿ 5.41ಕೋಟಿ ರೂ. ಗಳ ಅನುದಾನದ ವಿವಿಧ ಕಾರ್ಯಕ್ರಮಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಇದರಲ್ಲಿ ಪ್ರಮುಖವಾಗಿ ಕುಡಿಯುವ ನೀರು-26.23 ಲಕ್ಷ ರೂ., ನೈರ್ಮಲ್ಯ-71.64 ಲಕ್ಷ ರೂ., ಶಿಕ್ಷಣ- 170.13 ಲಕ್ಷ ರೂ., ಆರೋಗ್ಯ-53.84 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ-19.60 ಲಕ್ಷ, ರಸ್ತೆ-103.66 ಲಕ್ಷ, ವಸತಿ ನಿಲಯಗಳು-50.25 ಲಕ್ಷ, ಪಶುಚಿಕಿತ್ಸಾಲಯ-7.10 ಲಕ್ಷ ಸೇರಿದಂತೆ ರಾಜ್ಯ ಹಣಕಾಸು ಆಯೋಗದ ಅನಿರ್ಬಂತ ಅನುದಾನದಡಿ ಒಟ್ಟು 541.66 ಲಕ್ಷ ರೂ. ಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು.
ಜಿಪಂ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮಾತನಾಡಿ, ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಲ್ಲಿಯೇ ಜಿಪಂನ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ಡಿಸೆಂಬರ್ ಒಳಗಾಗಿಯೇ ನಿಗದಿಪಡಿಸಿದ ಕಾಮಗಾರಿ, ಹಾಗೂ ಕಾರ್ಯಕ್ರಮಗಳಿಗೆ ಅನುದಾನ ವೆಚ್ಚ ಮಾಡಿದಲ್ಲಿ ಮಾರ್ಚ್ ವೇಳೆಗೆ ಇನ್ನಷ್ಟು ಹೆಚ್ಚುವರಿ ಅನುದಾನ ಲಭ್ಯವಾಗುತ್ತದೆ. ಅಧಿಕಾರಿಗಳು ಯಾವುದೇ ನೆಪಗಳನ್ನು ಹೇಳದೆ, ಕ್ರಿಯಾ ಯೋಜನೆಯಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಗುಣಮಟ್ಟದ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಖಚಿತ ಎಂದರು. ಜಿಪಂ ಸಿಇಒ ಡಾ. ವಿಜಯಮಹಾಂತೇಶ ದಾನಮ್ಮನವರ, ಉಪಕಾರ್ಯದರ್ಶಿ ಆನಂದ್ ಇದ್ದರು.