Advertisement

ಮಾರ್ಗಸೂಚಿ ಉಲ್ಲಂಘನೆಗೆ ಕಠಿಣ ಕ್ರಮ

06:19 PM Aug 01, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ಬರದಂತೆ ತಡೆಗಟ್ಟಬೇಕಾದ ಜವಾಬ್ದಾರಿ ಆಯಾ ಸ್ಥಳೀಯ ಮಟ್ಟದ ಅಧಿಕಾರಿಗಳದ್ದಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು. ಕೋವಿಡ್‌-19 ಎರಡನೇ ಅಲೆಯ ಸಂಪೂರ್ಣ ನಿಯಂತ್ರಣ ಹಾಗೂ ಮೂರನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

Advertisement

ದಂಡ ವಿಧಿಸದಿರುವ ಕಾರಣ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರವಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು, ಧಾರ್ಮಿಕ ಸ್ಥಳಗಳಲ್ಲಿ ದರ್ಶನದ ಜೊತೆಗೆ ಸೇವೆ ಸಲ್ಲಿಸುವುದು ಹೀಗೆ ಬೇಜವಾªರಿಯಿಯಿಂದ ನಿಯಮ ಉಲ್ಲಂಘಿಸಲಾಗುತ್ತದೆ. ಇದರಿಂದ ಮೂರನೇ ಅಲೆಯ ಅಪಾಯವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ದಂಡ ವಿಧಿಸಬೇಕು ಎಂದರು. ಮೊದಲನೇ ಅಲೆಯಲ್ಲಿ 1800 ಮಕ್ಕಳ ಪ್ರಕರಣಗಳು, ಎರಡನೇ ಹಂತದಲ್ಲಿ 2,600 ಪ್ರಕರಣಗಳು ವರದಿಯಾಗಿದ್ದು, ಮೂರನೇ ಅಲೆಯಲ್ಲಿ ನಾಲ್ಕು ಸಾವಿರ ಮಕ್ಕಳ ಕೋವಿಡ್‌ ಪ್ರಕರಣಗಳು ವರದಿಯಾಗಬಹುದು ಎಂದು ಅಂದಾಜಿಸಿಸಲಾಗಿದೆ.

ಇದರಲ್ಲಿ 200 ಮಕ್ಕಳು ಆಸ್ಪತ್ರೆಗೆ ದಾಖಲಾಗಬಹುದು ಹಾಗೂ 40 ಮಕ್ಕಳು ಐಸಿಯುನಲ್ಲಿ ದಾಖಲಾಗಬಹುದು. ಐಸಿಯುನಲ್ಲಿ ದಾಖಲಾಗುವ ಮಕ್ಕಳಿಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕೋವಿಡ್‌ ಕರ್ತವ್ಯದಲ್ಲಿರುವ ವೈದ್ಯರು, ಸಿಬ್ಬಂದಿಗೆ ತರಬೇತಿ ನೀಡಿ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಬೇಕು. ಜಿಲ್ಲಾಡಳಿತ, ಇಲಾಖೆಗಳ ಸಮನ್ವಯತೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮಕ್ಕಳಿಗೆ ಬರಬಹುದಾದ ಸೋಂಕನ್ನು ತಡೆಗಟ್ಟಲು ಸಜ್ಜಾಗಬೇಕು ಹಾಗೂ ವೈದ್ಯಕೀಯ ಸಲಕರಣೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು.

ಜಿಲ್ಲಾಸ್ಪತ್ರೆಯಲ್ಲಿ 30ಕ್ಕಿಂತ ಹೆಚ್ಚು ಬೆಡ್‌ಗಳು, 36 ಐಸಿಯು ಪೆಡಿಯಾಟ್ರಿಕ್‌ ಬೆಡ್‌ಗಳಿವೆ. ಅಗತ್ಯವಿರುವ ವೆಂಟಿಲೇಟರ್, ಐಸಿಯು ಬೆಡ್ಸ್‌, ಮಲ್ಟಿ ಪ್ಯಾರಾ ಮಾನಿಟರ್‌ ಮತ್ತು ಇನ್ನುಳಿದವುಗಳನ್ನು ತರಿಸಲು ಈಗಾಗಲೇ ಏಜೆನ್ಸಿ ಗುರುತಿಸಿದ್ದು 10 ದಿನದೊಳಗಾಗಿ ತರಿಸಲಾಗುವುದು. ದುರ್ಬಲ ವರ್ಗದ 17 ಸಾವಿರ ಅಪೌಷ್ಟಿಕ ಮಕ್ಕಳ ಪಟ್ಟಿ ನಮ್ಮಲ್ಲಿದೆ. ಅವರಲ್ಲಿ 10 ಸಾವಿರ ಮಕ್ಕಳ ಪೋಷಕರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ.

ಉಳಿದ 7 ಸಾವಿರ ಮಕ್ಕಳ ಪೋಷಕರಿಗೂ 15 ದಿನದೊಳಗಾಗಿ ಆದ್ಯತೆಯ ಮೇಲೆ ಲಸಿಕೆ ನೀಡಲು ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ವಿಜಯಮಹಾಂತೇಶ ದಾನಮ್ಮನವರ್‌ ಮಾತನಾಡಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಮಕ್ಕಳ ಪೋಷಕರಿಗೆ ಸೋಂಕು ಹಾಗೂ ಲಸಿಕೆಯ ಬಗ್ಗೆ ಜಾಗೃತಿ ನೀಡಿ ಲಸಿಕೆ ಪಡೆಯಲು ಮನವೊಲಿಸಬೇಕು. ಪ್ರತಿಯೊಂದು ತಾಲೂಕು, ಗ್ರಾಮದ ವ್ಯಾಪ್ತಿಯ ಅಂಗನವಾಡಿಗೆ ಬರುವ ಪ್ರತಿಯೊಂದು ಮಗುವಿಗೂ ಹಾಗೂ ಮಕ್ಕಳ ಪೋಷಕರಿಗೂ ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಬೇಕು.

Advertisement

ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯವನ್ನು ಪಡೆದುಕೊಂಡು ಮನೆ-ಮನೆಗೆ ಭೇಟಿ ನೀಡಿ ಪರೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಮಾತನಾಡಿ, ಮೂರನೇ ಅಲೆ ಬಗ್ಗೆ ಜನರಲ್ಲಿ ಸೋಂಕಿನ ಬಗ್ಗೆ ಮಹಾನಗರಪಾಲಿಕೆ ವಾಹನಗಳಲ್ಲಿ ಹಾಗೂ ಪೊಲೀಸ್‌ ಗಸ್ತು ವಾಹನಗಳಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಧ್ವನಿವರ್ಧಕಗಳ ಮೂಲಕ ಅರಿವು ಮೂಡಿಸಬೇಕು ಎಂದರು.

ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌, ಡಿಎಚ್‌ಒ ಡಾ| ನಾಗರಾಜ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ರಾಘವನ್‌, ಜಿಲ್ಲಾ ಸರ್ಜನ್‌ ಡಾ| ಜಯಪ್ರಕಾಶ್‌, ಆರ್‌ಸಿಎಚ್‌ ಅಧಿಕಾರಿ ಡಾ| ಮೀನಾಕ್ಷಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next