Advertisement

ಕಟ್ಟಡ ಕಾರ್ಮಿಕರ ನೋಂದಣಿ ದಿಢೀರ್‌ ಹೆಚ್ಚಳ!

05:45 PM Jul 22, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಕಟ್ಟಡ ಕಾರ್ಮಿಕರಿಗೆ ಕೊರೊನಾ ಪರಿಹಾರದ ಜತೆಗೆ ಸರ್ಕಾರ, ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಕೇವಲ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 7477 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಸರ್ಕಾರ ಕೊರೊನಾ ಸಂಕಷ್ಟ ಪರಿಹಾರವಾಗಿ ಪ್ರತಿಯೊಬ್ಬರಿಗೆ ಮೂರು ಸಾವಿರ ರೂ. ನೀಡುತ್ತಿದೆ. ಇದಲ್ಲದೆ ಕಟ್ಟಡ ಕಾರ್ಮಿಕರ ಮಕ್ಕಳು ಹಾಗೂ ಅವಲಂಬಿತರಿಗಾಗಿ ನಿರಂತರವಾಗಿ ಶೈಕ್ಷಣಿಕ ಧನಸಹಾಯ, ವೈದ್ಯಕೀಯ ಧನಸಹಾಯ, ಹೆರಿಗೆ ಭತ್ಯೆ, ಮಕ್ಕಳ ಮದುವೆಗೆ ಧನಸಹಾಯ, ಪೌಷ್ಠಿಕ ಆಹಾರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿದ್ದು ಈ ಸೌಲಭ್ಯಗಳ ಕಾರಣದಿಂದಾಗಿ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಳ್ಳಲು ಹೆಚ್ಚಿನ ಜನ ಮುಗಿ ಬಿದ್ದಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಇರುವ ವಿವಿಧ ಸೌಲಭ್ಯಗಳನ್ನು ಕಬಳಿಸಲು ಕಟ್ಟಡ ಕಾರ್ಮಿಕರಲ್ಲದವರೂ ಸಹ ಸುಳ್ಳು ದಾಖಲೆ ಪತ್ರಗಳನ್ನು ನೀಡಿ ಕಟ್ಟಡ ಕಾರ್ಮಿಕರೆಂದು ನೋಂದಾಯಿಸಿಕೊಳ್ಳುವ ಕಾರ್ಯವೂ ವ್ಯಾಪಕವಾಗಿ ನಡೆದಿದೆ. ಅನರ್ಹರಿಗೆ ಕಟ್ಟಡ ಕಾರ್ಮಿಕ ಕಾರ್ಡ್‌ ಕೊಡಿಸುವಲ್ಲಿ ಮಧ್ಯವರ್ತಿಗಳ ಹಾವಳಿಯೂ ಅತಿ ಹೆಚ್ಚಾಗಿದ್ದರಿಂದ ಜಿಲ್ಲೆಯಲ್ಲಿ ಅನರ್ಹ ಕಟ್ಟಡ ಕಾರ್ಮಿಕರ ಕಾರ್ಡ್‌ಗಳ ಸಂಖ್ಯೆಯೂ ದಿಢೀರನೇ ಏರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲೆಯಲ್ಲಿ ಅರ್ಧಕ್ಕರ್ಧ ಕಟ್ಟಡ ಕಾರ್ಮಿಕರ ಕಾಡ್‌ ìಗಳನ್ನು ಅನರ್ಹರು ಪಡೆದಿದ್ದಾರೆ ಎಂದು ಸ್ವತಃ ಕಟ್ಟಡ ಕಾರ್ಮಿಕ ಸಂಘಟನೆಗಳ ಮುಖಂಡರೇ ಬಹಿರಂಗವಾಗಿ ಆರೋಪಿಸುತ್ತಿದ್ದಾರೆ.

3 ತಿಂಗಳಲ್ಲಿ ಸಾವಿರಾರು ನೋಂದಣಿ: ಕಟ್ಟಡ ಕಾರ್ಮಿಕರ ನೋಂದಣಿ ಎಷ್ಟು ತೀವ್ರಗತಿಯಲ್ಲಿ ಏರುತ್ತಿದೆ ಎಂದರೆ ಪ್ರಸಕ್ತ ವರ್ಷ ಏಪ್ರಿಲ್‌ 1ರಿಂದ ಜೂನ್‌ 30 ರವರೆಗೆ ಅಂದರೆ ಕೇವಲ ಮೂರೇ ಮೂರು ತಿಂಗಳುಗಳಲ್ಲಿ 7477 ಜನರು ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 5424 ಪುರುಷರು, 2053 ಮಹಿಳೆಯರು ಇದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ ಹರಿಹರ ಕಾರ್ಮಿಕ ಇಲಾಖೆ ಕಚೇರಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 1561 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ.

Advertisement

ಇನ್ನುಳಿದಂತೆ ದಾವಣಗೆರೆ ಒಂದನೇ ವೃತ್ತ ಕಚೇರಿಯಲ್ಲಿ 1422, ದಾವಣಗೆರೆ ಎರಡನೇ ವೃತ್ತ ಕಚೇರಿಯಲ್ಲಿ 989, ದಾವಣಗೆರೆ ಮೂರನೇ ವೃತ್ತ ಕಚೇರಿಯಲ್ಲಿ 1168, ಚನ್ನಗಿರಿ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ 1203, ಹೊನ್ನಾಳಿ ನಿರೀಕ್ಷಕರ ಕಚೇರಿಯಲ್ಲಿ 827 ಹಾಗೂ ಜಗಳೂರು ನಿರೀಕ್ಷಕರ ಕಚೇರಿಯಲ್ಲಿ 307ಜನರು ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಲಕ್ಷ ಮೀರಿದ ನೋಂದಣಿ: ಜಿಲ್ಲೆಯಲ್ಲಿ ಈವರೆಗೆ ನೋಂದಣಿ ಮಾಡಿಸಿಕೊಂಡ ಒಟ್ಟು ಕಟ್ಟಡ ಕಾರ್ಮಿಕರ ಸಂಖ್ಯೆ ಒಂದು ಲಕ್ಷ ಮೀರಿದೆ.

ಕಾರ್ಮಿಕ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜೂನ್‌ 30ವರೆಗೆ ಒಟ್ಟು 1,02,658 ಜನರು ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಅಂಕಿ-ಅಂಶದ ಆಧಾರದಲ್ಲಿ ಜಿಲ್ಲೆಯ ದಾವಣಗೆರೆ ಎರಡನೇ ವೃತ್ತ ಕಚೇರಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 20,806 (ಇವರಲ್ಲಿ 4488 ಮಹಿಳೆಯರು) ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ.

ಉಳಿದಂತೆ ದಾವಣಗೆರೆ ಕಾರ್ಮಿಕ ವೃತ್ತ ಕಚೇರಿಯಲ್ಲಿ ಒಂದರಲ್ಲಿ 15,673 (ಇವರಲ್ಲಿ 2740 ಮಹಿಳೆಯರು), ದಾವಣಗೆರೆ ಕಾರ್ಮಿಕ ವೃತ್ತ ಕಚೇರಿಯಲ್ಲಿ ಮೂರರಲ್ಲಿ 17,982 (ಇವರಲ್ಲಿ 4555 ಮಹಿಳೆಯರು), ಚನ್ನಗಿರಿ ನಿರೀಕ್ಷಕರ ಕಚೇರಿಯಲ್ಲಿ 11,813 (ಇವರಲ್ಲಿ 3084ಮಹಿಳೆಯರು), ಹರಿಹರ ನಿರೀಕ್ಷಕರ ಕಚೇರಿಯಲ್ಲಿ 17,916 (ಇವರಲ್ಲಿ 4229 ಮಹಿಳೆಯರು), ಹೊನ್ನಾಳಿ ನಿರೀಕ್ಷಕರ ಕಚೇರಿಯಲ್ಲಿ 9738 (ಇವರಲ್ಲಿ 1988 ಮಹಿಳೆಯರು), ಜಗಳೂರು ನಿರೀಕ್ಷಕರ ಕಚೇರಿಯಲ್ಲಿ 8730 (ಇವರಲ್ಲಿ 2200 ಮಹಿಳೆಯರು) ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಸರ್ಕಾರ ವಿವಿಧ ಸೌಲಭ್ಯ ಕಲ್ಪಿಸುತ್ತಿರುವುದರಿಂದ ಕಟ್ಟಡ ಕಾರ್ಮಿಕರ ನೋಂದಣಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಇದರಲ್ಲಿ ಹೆಚ್ಚು ಜನ ಅನರ್ಹರು ಸೇರಿಕೊಳ್ಳುತ್ತಿರುವುದು ಬೇಸರದ ಸಂಗತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next