Advertisement

ಪಕ್ಷದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ

06:01 PM Jul 19, 2021 | Team Udayavani |

ದಾವಣಗೆರೆ: ಬಿಜೆಪಿಯಲ್ಲಿನ 24 ಪ್ರಕೋಷ್ಠಗಳ ಸಂಚಾಲಕರು ಪಕ್ಷ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಂ.ಬಿ. ಭಾನುಪ್ರಕಾಶ್‌ ಕರೆ ನೀಡಿದರು. ದಾವಣಗೆರೆ ತಾಲೂಕಿನ ಸೋಮೇಶ್ವರ ವಸತಿ ವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವುದು ಮತ್ತು ಜಾರಿಗೊಳಿಸಿದಂತಹ ಯೋಜನೆಗಳನ್ನು ಅರ್ಹ ಜನರಿಗೆ ತಲುಪಿಸುವುದು ಪ್ರಕೋಷ್ಠದ ಕರ್ತವ್ಯ ಆಗಬೇಕು ಎಂದರು. ದೇಶದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕೋಷ್ಠಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಆಡಳಿತ ನಿರಂತರವಾಗಿ ನಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರಕೋಷ್ಠಗಳ ಸಂಚಾಲಕರು ಜನರ ಮನಸ್ಸಿನಲ್ಲಿ ಏನಿದೆ, ಏನಿಲ್ಲ ಎಂಬ ಮಾಹಿತಿ ಸಂಗ್ರಹಿಸಿ ತಮ್ಮ ಪಾಲಿನ ಜವಾಬ್ದಾರಿಯನ್ನು ನಿಷ್ಠೆಯಿಂದ, ಶ್ರದ್ಧೆಯಿಂದ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಹುದ್ದೆಗಳು ಲಭಿಸುತ್ತವೆ. ಪ್ರಕೋಷ್ಠಗಳ ರಾಜ್ಯಾಧ್ಯಕ್ಷ ಭಗವಂತ ಖೂಬಾ ಕೇಂದ್ರ ಸಚಿವರಾಗಿರುವುದು ಇದಕ್ಕೆ ಸಾಕ್ಷಿ ಎಂದರು. ಕೋವಿಡ್‌ ಎರಡನೇ ಅಲೆಯಲ್ಲಿ ದೇಶ ಮತ್ತು ರಾಜ್ಯದಲ್ಲಿ ಸಾಕಷ್ಟು ಸಾವು-ನೋವು ಕಂಡಿರುವ ಸಂದರ್ಭದಲ್ಲಿ ಪ್ರಕೋಷ್ಠಗಳ ಸಂಚಾಲಕರು ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.

ಸೋಂಕಿತರಿಗೆ ನೆರವು, ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವುದು, ಸಮಸ್ಯೆಗೆ ಸ್ಪಂದಿಸುವಂತಹ ಕೆಲಸಗಳನ್ನು ನಾವು ಮಾಡಿದ್ದೇವೆ ಎಂದರು. ಪ್ರಕೋಷ್ಠಗಳ ಪ್ರಮುಖ ಕೆಲಸ ಅಭಿವೃದ್ಧಿ ಮತ್ತು ಸಂಶೋಧನೆ ಮಾಡುವಂತಾಗಿದೆ. ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಸಂಘಟಿತರಾಗಿ ಕೆಲಸ ಮಾಡಿ ಹೆಚ್ಚಿನ ಅನುಭವವನ್ನು ಪಡೆಯುವಂತವರಿಗೆ ಹೆಚ್ಚಿನ ಜವಾಬ್ದಾರಿ ಕೊಡಲಾಗುತ್ತದೆ.

ಪ್ರಕೋಷ್ಠಗಳ ನಿರ್ವಹಣೆ ಅದಕ್ಕೆ ಉತ್ತಮ ಉದಾಹರಣೆ. ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೊನಾ ನಿಯಂತ್ರಣಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

Advertisement

ಇಂತಹ ಸಂದರ್ಭದಲ್ಲಿ ಪಕ್ಷ ವಹಿಸುವ ಜವಾಬ್ದಾರಿಗಳನ್ನು ಪ್ರತಿಯೊಬ್ಬರೂ ಸಮರ್ಥವಾಗಿ ನಿಭಾಯಿಸುವ ಸರ್ಕಾರಗಳು ಉತ್ತಮ ಆಡಳಿತ ನೀಡಲು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಮಾಯಕೊಂಡ ಶಾಸಕ ಪ್ರೊ| ಎನ್‌. ಲಿಂಗಣ್ಣ ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಪ್ರಕೋಷ್ಠಗಳನ್ನು ಹೆಚ್ಚು ತೊಡಗಿಸಿಕೊಳ್ಳುವ ಕೆಲಸ ಮಾಡಲಾಗುತ್ತದೆ. ಪಕ್ಷ ಸಂಘಟಿಸುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಮತ್ತೆ ಅ ಧಿಕಾರಕ್ಕೆ ತರಲು ಸುಲಭವಾಗುತ್ತದೆ ಎಂದರು. ಪ್ರಕೋಷ್ಠಗಳ ರಾಜ್ಯ ಸಹ ಸಂಚಾಲಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷದ ಸಂಘಟನೆಯನ್ನು ಸರ್ವ ವ್ಯಾಪಿ ಮಾಡುವುದು ಪ್ರಕೋಷ್ಠಗಳ ಉದ್ದೇಶವಾಗಿದೆ.

ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಲು ಕಾರ್ಯ ಚಟುವಟಿಕೆಗಳನ್ನು ಹೇಗೆ ರೂಪಿಸಬೇಕೆಂದು ಪ್ರಕೋಷ್ಠಗಳ ಮೂಲಕ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಪ್ರಕೋಷ್ಠಗಳ ರಾಜ್ಯ ಸಂಚಾಲಕರಾದ ಪ್ರತಾಪಸಿಂಹ ನಾಯಕ್‌, ಬಸವರಾಜ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌, ಮೇಯರ್‌ ಎಸ್‌.ಟಿ. ವೀರೇಶ್‌, ಮುಖಂಡರಾದ ಸುಧಾ ಜಯರುದ್ರೇಶ್‌, ಕೆ.ಎಂ. ಸುರೇಶ್‌, ಕೆ.ಎಂ. ಹನುಮಂತಪ್ಪ, ದೇವೇಂದ್ರಪ್ಪ, ಸಂಗನಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next