ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು, ಮೆಕ್ಕೆಜೋಳದ ಕಣಜ ಖ್ಯಾತಿಯ ಜಿಲ್ಲೆ, ಶನಿವಾರ ಮತ್ತು ಭಾನುವಾರ ಸುರಿದ ಪುನರ್ವಸು ಮಳೆ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ದಾವಣಗೆರೆ ತಾಲೂಕಿನ ಕಾಡಜ್ಜಿ, ಕಡ್ಲೆಬಾಳು, ಮಾಗಾನಹಳ್ಳಿ ಕೆರೆ ಭರ್ತಿ ಆಗಿವೆ. ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಗೆ 10 ಅಡಿ ನೀರು ಬಂದಿದೆ. ಬಿಳಿಚೋಡು ಕೆರೆಗೆ ಸಾಕಷ್ಟು ನೀರು ಬಂದಿದೆ.
ದಶಕಗಳಿಂದ ತುಂಬದೇ ಇದ್ದಂತಹ ಕೆರೆಗಳು ಒಂದು ರಾತ್ರಿಯ ಮಳೆಗೆ ತುಂಬಿ ಕೋಡಿ ಬಿದ್ದಿರುವುದು ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿದೆ. ದಾವಣಗೆರೆ ಸಮೀಪದ ಆಲೂರು ಸಮೀಪದ ಆಲೂರು-ಕಾಡಜ್ಜಿ ಹಳ್ಳದ ನೀರು ನುಗ್ಗಿತ್ತು. ಆಲೂರು ಸಮೀಪದ ಕೆಇಬಿ ಉಪ ಕೇಂದ್ರದಲ್ಲಿ ನೀರಿನಲ್ಲಿ ಸಿಲುಕಿಕೊಂಡಿದ್ದ ಸ್ಟೇಷನ್ ಆಪರೇಟರ್ ಸಂತೋಷ್‌ಕುಮಾರ್ ಮತ್ತು ಸಹಾಯಕ ಕೃಷ್ಣಪ್ರಸಾದ್ ಎಂಬುವವರನ್ನು ಅಗ್ನಿಶಾಮಕದಳದ ಸಿಬ್ಬಂದಿ ಕೆಲ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದರು.
ದಾವಣಗೆರೆ ಹೊರ ವಲಯದ ಬೈಪಾಸ್ ರಸ್ತೆಯ ಕೆಳ ಸೇತುವೆಯಲ್ಲಿ ಮಳೆ ನೀರಿನಲ್ಲಿ ಸಿಲುಕಿಕೊಂಡಿದ ಕಾರು ಚಾಲಕನನ್ನು ಬಸವಪ್ರಭು ಶರ್ಮ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಕೆಳ ಸೇತುವೆಯಲ್ಲಿ ನೀರು ನಿಂತಿದ್ದರ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ದಾವಣಗೆರೆಗೆ ಹೊಂದಿಕೊಂಡಿರುವ ಮಾಗಾನಹಳ್ಳಿ ಬಳಿ ಸೇತುವೆ ಮೇಲೆ ನೀರು ಹರಿದ ಪರಿಣಾಮ ದಾವಣಗೆರೆ-ಹರಪನಹಳ್ಳಿ ನಡುವಿನ ಸಂಚಾರಕ್ಕೆ ತೊಂದರೆಯಾಗಿತ್ತು. ಭಾನುವಾರ ಬೆಳಗ್ಗೆಯೂ ಸೇತುವೆ ನೀರಿನಲ್ಲಿ ಮುಳುಗಿತ್ತು. ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ವಾಹನ ಸವಾರರು ಸಂಚರಿಸಿದರು.
ಕೊಂಚ ಹೆಚ್ಚು ಕಡಿಮೆಯಾದರೂ ನೀರು ಪಾಲಾಗುವ ಭೀತಿ ಮಧ್ಯೆಯೇ ವಾಹನಗಳ ಸವಾರರು ಸಂಚಾರ ಮಾಡಿದರು. ದಾವಣಗೆರೆ ತಾಲೂಕಿನ ಅರಸಾಪುರ, ಕಡ್ಲೆàಬಾಳು, ಓಬಜ್ಜಿಹಳ್ಳಿ, ಮಲ್ಲಾಪುರ ಒಳಗೊಂಡಂತೆ ಕೆಲ ಗ್ರಾಮಗಳಲ್ಲಿ ಮಳೆ ನೀರು ನದಿಯಂತೆ ಹರಿಯಿತು. ಹೊಲ-ಗದ್ದೆಗಳಲ್ಲಿ ಕೃಷಿ ಚಟುವಟಿಕೆಗೆ ನಿಲ್ಲಿಸಿದ ಟ್ರಾÂಕ್ಟರ್‌ಗಳು ನೀರಿನಲ್ಲಿ ಮುಳುಗಿವೆ. ಪಂಪ್‌ಸೆಟ್‌ಗಳು ಕೊಚ್ಚಿ ಹೋಗಿವೆ. ನಾಟಿಗೆ ಸಿದ್ಧಪಡಿಸಿದ್ದ ಭತ್ತದ ಸಸಿ ಮಡಿಗಳು ಸಂಪೂರ್ಣ ನಾಶವಾಗಿವೆ. ನೂರಾರು ಎಕರೆ ಹೊಲಗಳು ನೀರಿನಲ್ಲಿ ಮುಳುಗಿದ್ದರ ಪರಿಣಾಮ ಬೆಳೆಗಳು ಜಲಾವೃತವಾಗಿ ನಷ್ಟವಾಗಿದೆ. ಕೆಲವೇ ದಿನಗಳ ಹಿಂದೆ ಮಳೆಗಾಗಿ ಪರಿತಪಿಸುತ್ತಿದ್ದ ಜನರು, ರೈತರು ಇದೀಗ ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿದ್ದಾರೆ.
ಕೆಲ ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತವಾಗಿತ್ತು. ದಾವಣಗೆರೆ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ 2 ಮನೆಗಳು ಭಾಗಶಃ ಹಾನಿಗೀಡಾಗಿದ್ದು 70 ಸಾವಿರ ರೂ. ನಷ್ಟ ಉಂಟಾಗಿದೆ. ಕಡ್ಲೆàಬಾಳು ಗ್ರಾಮದಲ್ಲಿ ಸಹ 2 ಮನೆಗಳು ಭಾಗಶಃ ಹಾನಿಗೀಡಾಗಿದ್ದು 70 ಸಾವಿರ ರೂ. ನಷ್ಟ ಉಂಟಾಗಿದೆ. ಹಳೇಬಾತಿಯಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. 30 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಕುಂಟಪಾಲನಹಳ್ಳಿಯಲ್ಲಿ ಒಂದು ಮನೆ ಭಾಗಶಃ ಹಾನಿಗೀಡಾಗಿದೆ. ಮಲ್ಲಶೆಟ್ಟಿಹಳ್ಳಿಯಲ್ಲಿ 2 ಮನೆಗಳು ಭಾಗಶಃ ಹಾನಿಗೀಡಾಗಿವೆ. ಒಟ್ಟಾರೆ 2.6 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಹರಿಹರ ತಾಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆ ಭಾಗಶಃ ಹಾನಿಯಿಂದಾಗಿ 2 ಲಕ್ಷ ರೂ. ಅಂದಾಜು ನಷ್ಟವಾಗಿದೆ.
ಹೊನ್ನಾಳಿಯಲ್ಲಿ 5 ಪಕ್ಕಾ ಮನೆ ಭಾಗಶಃ ಹಾನಿಯಿಂದಾಗಿ 2 ಲಕ್ಷ ರೂ.ಹಾನಿಯಾಗಿದೆ. ಚನ್ನಗಿರಿ ತಾಲೂಕಿನ ಕಬ್ಬಳ, ದೊಡ್ಡ ಅಬ್ಬಿಗೆರೆ, ನುಗ್ಗೇಹಳ್ಳಿ ಒಳಗೊಂಡಂತೆ ನಾಲ್ಕು ಗ್ರಾಮಗಳಲ್ಲಿ 4 ಮನೆಗಳು ಭಾಗಶಃ ಹಾನಿಗೀಡಾಗಿವೆ. ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಶನಿವಾರ ಸಂಜೆ 6ಕ್ಕೆ ಪ್ರಾರಂಭವಾದ ಮಳೆ ಭಾನುವಾರದ ಬೆಳಗ್ಗೆಯವರೆಗೆ ಸುರಿದಿದೆ. ಭಾನುವಾರ ಬೆಳಗ್ಗೆ ಕೊಂಚ ಬಿಡುವಿನ ನಂತರ ಮಳೆ ಮುಂದುವರೆಯಿತು. ಶೇಖರಪ್ಪ ನಗರ, ಚೌಡೇಶ್ವರಿ ನಗರ, ಎಸ್.ಎಂ. ಕೃಷ್ಣ ನಗರ, ಶಿವನಗರ, ಹೆಗಡೆ ನಗರ ಇತರೆ ಭಾಗ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ರಾತ್ರಿಯಿಡೀ ತೊಂದರೆ ಅನುಭವಿಸುವಂತಾಯಿತು. ಮನೆ ಒಳಗೆ ನುಗ್ಗಿದ ನೀರು ಹೊರ ಹಾಕುವಷ್ಟರಲ್ಲಿ ಜನರು ಹೈರಣಾದರು.
ಮಹಾನಗರ ಪಾಲಿಕೆ, ಶೇಖರಪ್ಪ ನಗರ, ಜಾಲಿನಗರ, ಡಿಸಿಎಂ ಟೌನ್‌ಶಿಪ್ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತ ಕಾರಣಕ್ಕೆ ಪಾದಾಚಾರಿಗಳು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ರಾತ್ರಿ ಕೆಲವು ಕಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.