Advertisement

ಕಾನೂನು ದುರ್ಬಳಕೆ ವಿರೋಧಿಸಿ ಹೋರಾಟ

08:49 PM Jul 18, 2021 | Team Udayavani |

ದಾವಣಗೆರೆ: ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ ಮತ್ತು ದೇಶದ್ರೋಹ ಕಾನೂನು ದುರ್ಬಳಕೆ ಖಂಡಿಸಿ ಭಾರತ ಕಮ್ಯುನಿಸ್ಟ್‌ ಪಕ್ಷ ಆಗಸ್ಟ್‌ ತಿಂಗಳು ಪೂರ್ತಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ತಿಳಿಸಿದರು.

Advertisement

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ ರದ್ದತಿ ಮತ್ತು ದೇಶದ್ರೋಹ ಕಾನೂನು ದುರ್ಬಳಕೆ ವಿರೋಧಿಸಿ ರಾಜ್ಯದ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೂ ಜಾಥಾ, ಪ್ರತಿಭಟನೆ, ಜನಾಂದೋಲನ, ವಿಚಾರಸಂಕಿರಣ ಆಯೋಜಿಸಿ ಹೋರಾಟ ನಡೆಸಲಾಗುವುದು ಎಂದರು.

ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ, ಪ್ರಗತಿಪರರ ಧ್ವನಿ ಹತ್ತಿಕ್ಕಲು ಕರಾಳ ಕಾನೂನು ಬಳಸಿಕೊಂಡು ದೇಶದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 5229 ಪ್ರಕರಣಗಳನ್ನು ದಾಖಲಿಸಿದೆ. ಬಡವರ, ಶೋಷಿತರ ಪರ ಹೋರಾಟ ಮಾಡುವಂತಹ ಪ್ರಗತಿಪರರ ವಿರುದ್ಧ ಈ ಕಾನೂನಿನಡಿ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಕಳವಳ ವ್ಯಕ್ತಪಡಿಸಿದೆ.

ಈ ಎರಡು ಕಾನೂನುಗಳ ಮೂಲಕ ಸರ್ಕಾರಗಳು ಪ್ರಗತಿಪರರ ವಿರುದ್ಧ ಪ್ರಕರಣ ದಾಖಲಿಸಿ ಅವರ ಧ್ವನಿ ಹತ್ತಿಕ್ಕುವ ಕೆಲಸ ನಡೆದಿದೆ. ಕಾಯ್ದೆ ರದ್ದು ಮಾಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಎಚ್‌.ಜಿ. ಉಮೇಶ್‌, ಆವರಗೆರೆ ವಾಸು, ಆನಂದರಾಜ್‌, ನಾಗರಾಜ್‌ ಟಿ.ಎಸ್‌. ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next