ಹೊನ್ನಾಳಿ: ಲಂಬಾಣಿ ಸಮಾಜದ ಪರ ನನ್ನ ಧ್ವನಿ ಸದಾ ಇರುತ್ತದೆ. ವಿಧಾನಸೌಧದೊಳಗೆ ಹಾಗೂ ಹೊರಗಡೆ ಹೋರಾಟ ನಡೆಸಿ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೆಪಿಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಸಂತ ಸೇವಾಲಾಲರ ಜನ್ಮಸ್ಥಳ ಭಾಯಗಡ್ ಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಂಬಾಣಿ ಸಮಾಜ ಪುರಾತನ ಕಾಲದಿಂದ ಆಚರಿಸಿಕೊಂಡು ಬಂದಿರುವ ಸಂಸ್ಕೃತಿ, ಪರಂಪರೆ ಬದಲಾಗಿಲ್ಲ. ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಮುಂದಾಗಬೇಕಿದೆ. ಲಂಬಾಣಿ ಸಮಾಜದ ಜೊತೆಗೆ ಬೆಳೆದವನು ನಾನು. ಹಾಗಾಗಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ.
ಸಮಾಜದವರು ಉತ್ತಮ ಬದುಕು ರೂಪಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತೇನೆ ಎಂದರು. ಲಂಬಾಣಿ ಸಮಾಜದವರು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಷ್ಟಪಟ್ಟು ಜೀವನ ಸಾಗಿಸುವ ಏಕೈಕ ಸಮಾಜ ಎಂದರೆ ಲಂಬಾಣಿ ಸಮಾಜ ಎಂದ ಡಿಕೆಶಿ, ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿ ಕಾರದ ಚುಕ್ಕಾಣಿ ಹಿಡಿಯುತ್ತದೆ. ಎಲ್ಲಾ ಸಮಾಜಗಳ ಕಷ್ಟ ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇವೆ.
ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು. ಸಂವಾದದಲ್ಲಿ ಗುಳೆ ತಡೆಗಟ್ಟುವುದು, ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಇತ್ಯರ್ಥ, ಸಮಾಜಕ್ಕೆ ಸದಾಶಿವ ಆಯೋಗದಿಂದಾಗುವ ನಷ್ಟ ಹಾಗೂ ಆಯೋಗದ ಶಿಫಾರಸು ಕೈ ಬಿಡುವುದು, ಲಂಬಾಣಿ ಸಮಾಜದ ಮಹಿಳೆಯರಲ್ಲಿ ಹೆಚ್ಚು ಗರ್ಭಕೋಶದ ಕ್ಯಾನ್ಸರ್ ಕಾಣಿಸುವುದು, ಸಮ ಸಮಾಜ ನಿರ್ಮಾಣವಾಗದೇ ಇರುವುದು ಸೇರಿದಂತೆ ಮತ್ತಿತರ ವಿಚಾರಗಳನ್ನು ಲಂಬಾಣಿ ಸಮಾಜದ ಯುವಕ, ಯುವತಿಯರು ಹಾಗೂ ಮುಖಂಡರು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದರು.
ಎಲ್ಲಾ ಪ್ರಶ್ನೆಗಳನ್ನು ಸಮಾಧಾನಚಿತ್ತದಿಂದ ಆಲಿಸಿದ ಡಿ.ಕೆ. ಶಿವಕುಮಾರ್, ಲಂಬಾಣಿ ಸಮಾಜದ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡಲು ಸಿದ್ಧ ಎಂದರು. ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು. ಮಾಜಿ ಸಚಿವ ಬಾಬುರಾವ್ ಚೌವಾಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ಶಿವಮೂರ್ತಿ ನಾಯ್ಕ, ಶ್ರೀನಿವಾಸ್, ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಉಪಾಧ್ಯಕ್ಷ ಡಾ| ಎಲ್. ಈಶ್ವರ ನಾಯ್ಕ ಇತರರು ಉಪಸ್ಥಿತರಿದ್ದರು.