Advertisement
ದಾವಣಗೆರೆ: ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೇ ಇರುವುದರಿಂದ ಹಾಗೂ ಸರ್ಕಾರವೂ ಬೆಂಬಲ ಬೆಲೆಯಡಿ ಮೆಕ್ಕೆಜೋಳವನ್ನು ಖರೀದಿಸದೇ ಇರುವುದರಿಂದ ಬೇಸತ್ತ ಜಿಲ್ಲೆಯ ನೂರಾರು ರೈತರು, ಈ ಬಾರಿ ಇತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ.
Related Articles
Advertisement
ರಸಗೊಬ್ಬರವೊಂದನ್ನೇ ನೀಡಿದರೆ ಮತ್ತೆ ಅದರ ದುಷ್ಪರಿಣಾಮವನ್ನೂ ಎದುರಿಸಬೇಕಾಗುತ್ತದೆ. ಇದರಿಂದಾಗಿ ರಸಗೊಬ್ಬರದ ಜತೆಗೆ ಸಾವಯವ ಗೊಬ್ಬರ ಬಳಕೆಯನ್ನೂ ಹೆಚ್ಚಿಸಬೇಕಾಗುತ್ತದೆ. ಆಗ ಕೃಷಿ ಖರ್ಚು ದುಪ್ಪಟ್ಟು ಆಗುತ್ತದೆ. ಈ ಎಲ್ಲದರ ಬಗ್ಗೆ ಅರಿವು ಮೂಡಿಸಿಕೊಂಡಿರುವ ಜಿಲ್ಲೆಯ ಕೆಲ ರೈತರು, ಈ ವರ್ಷದಿಂದಲೇ ಮೆಕ್ಕೆಜೋಳಕ್ಕೆ ನೀಡುತ್ತಿದ್ದ ಆದ್ಯತೆ ಕಡಿಮೆ ಮಾಡಿ, ಬೆಳೆ ಬದಲಾವಣೆಗೆ ಮುಂದಾಗಿದ್ದಾರೆ. ಮೆಕ್ಕೆಜೋಳದಲ್ಲಿ ಅಂತರ ಬೆಳೆ: ಮೆಕ್ಕೆಜೋಳವನ್ನು ಏಕ ಬೆಳೆಯಾಗಿ ನಿರಂತರವಾಗಿ ಬೆಳೆಯುತ್ತ ಬಂದಿರುವ ಒಂದಿಷ್ಟು ರೈತರು, ಒಮ್ಮೆಲೆ ಮೆಕ್ಕೆಜೋಳ ಬೆಳೆ ಕೈಬಿಡದೆ ಕುಸಿದಿರುವ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದಾರೆ.
ಮೆಕ್ಕೆಜೋಳದೊಂದಿಗೆ ಅಂತರ ಬೆಳೆಯಾಗಿ ಬೆಳೆಯಲು ಈ ಬಾರಿ ವಿಶೇಷ ಕಾರ್ಯಕ್ರಮದ ಮೂಲಕ ಪ್ರೋತ್ಸಾಹ ನೀಡಿದ ಕೃಷಿ ಇಲಾಖೆ, ರೈತರಿಗೆ ಚಿಕ್ಕ ಚಿಕ್ಕ ಪ್ಯಾಕೆಟ್‌ಗಳಲ್ಲಿ ತೊಗರಿಬೀಜ ವಿತರಿಸಿದೆ. ಆದ್ದರಿಂದ ರೈತರು ಮೆಕ್ಕೆಜೋಳಕ್ಕೆ ಹೊಂದಿಕೊಂಡು ಉತ್ತಮವಾಗಿ ಬೆಳೆಯುವ ತೊಗರಿಬೀಜವನ್ನೇ ಹೆಚ್ಚು ಕೃಷಿಕರು ಬಿತ್ತನೆ ಮಾಡಿದ್ದಾರೆ. ಇದರಿಂದಾಗಿ ಮೆಕ್ಕೆಜೋಳ ಬೆಳೆಯೊಂದಕ್ಕೆ ಜೋತುಬೀಳುವ ರೈತರ ಚಾಳಿಗೆ ತುಸು ಬ್ರೇಕ್ ಬಿದ್ದಂತಾಗಿದೆ. ಇದರ ಪರಿಣಾಮ ಈ ಬಾರಿ ಏಳು ಸಾವಿರ ಹೆಕ್ಕೇರ್‌ಗೂ ಅಧಿಕ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.
ತೋಟಗಾರಿಕೆಯತ್ತ ಚಿತ್ತ: ಹೆಚ್ಚು ಮಳೆ ಹಾಗೂ ನೀರಾವರಿ ಸೌಲಭ್ಯ ಸಾಧ್ಯವಿರುವ ಜಿಲ್ಲೆಯ ದಾವಣಗೆರೆ, ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ಅನೇಕ ರೈತರು ಮೆಕ್ಕೆಜೋಳ ಕೃಷಿಯನ್ನೇ ಸಂಪೂರ್ಣವಾಗಿ ಕೈಬಿಟ್ಟು ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಿದ್ದಾರೆ.
ಹೊಸದಾಗಿ ತೋಟ ಮಾಡಲು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸಿಗುವ ಕೂಲಿ ಅನುದಾನವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಒಬ್ಬ ರೈತ 2.5 ಲಕ್ಷ ರೂ.ವರೆಗೂ ಉದ್ಯೋಗಖಾತ್ರಿ ಯೋಜನೆಯಡಿ ಲಾಭ ಪಡೆದುಕೊಂಡಿದ್ದಾನೆ. ಇದರ ಪರಿಣಾಮವಾಗಿ ಈ ವರ್ಷ ಅಂದಾಜು ಎರಡು ಸಾವಿರ ಹೆಕ್ಟೇರ್ ನಷ್ಟು ಅಡಿಕೆ ಪ್ರದೇಶ ವಿಸ್ತರಣೆಯಾಗುತ್ತಿದೆ.
ಕಳೆದ ನಾಲ್ಕೈದು ವರ್ಷಗಳಲ್ಲಿ ಸರಾಸರಿ 25 ಸಾವಿರ ಹೆಕ್ಟೇರ್ ಅಡಿಕೆ ಪ್ರದೇಶ ವಿಸ್ತರಣೆಯಾಗಿದೆ. ಅಡಿಕೆ ತೋಟದಲ್ಲಿ ನಾಲ್ಕೈದು ವರ್ಷಗಳಲ್ಲಿ ಇಳುವರಿ ಶುರುವಾಗುತ್ತದೆ. ಅಲ್ಲಿಯವರೆಗೂ ಅಡಿಕೆ ಜತೆಗೆ ತರಕಾರಿ, ಪಪ್ಪಾಯ, ನುಗ್ಗೆ, ಹೂವು, ಬಾಳೆ ಬೆಳೆದು ಆದಾಯ ಗಳಿಸಬಹುದು. ಹೊಸ ತೋಟ ನಿರ್ಮಾಣಕ್ಕೆ ಉದ್ಯೋಗ ಖಾತ್ರಿಯಡಿ ಧನಸಹಾಯವನ್ನೂ ಪಡೆಯಬಹುದು ಎಂಬ ಕಾರಣಕ್ಕಾಗಿ ರೈತರಿಗೆ ಅಡಿಕೆ ತೋಟ ಹೆಚ್ಚು ಆಕರ್ಷಿಸಿದೆ.
ಕೆಲವು ರೈತರು ವಿವಿಧ ಹಣ್ಣು, ಹೂವು ಕೃಷಿಗೂ ಕೈಹಾಕಿದ್ದಾರೆ. ಒಟ್ಟಾರೆ ತೋಟಗಾರಿಕೆ ಬೆಳೆಗಳಿಗೆ ಪರಿವರ್ತನೆಯಾದ ಪ್ರದೇಶದಲ್ಲಿ ಶೇ. 75ಕ್ಕೂ ಹೆಚ್ಚು ಕೃಷಿ ಪ್ರದೇಶ ಈ ಮೊದಲು ಮೆಕ್ಕೆಜೋಳ ಬಿತ್ತನೆ ಪ್ರದೇಶವಾಗಿತ್ತು ಎಂಬುದು ಗಮನಾರ್ಹ.