ದಾವಣಗೆರೆ: ದಾವಣಗೆರೆಯಲ್ಲಿ ಖಾಸಗಿ ಸಹಭಾಗಿತ್ವದ ಬದಲಿಗೆ ರಾಜ್ಯ ಸರ್ಕಾರವೇ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಘೋಷಣೆ ಸ್ವಾಗತಾರ್ಹ. ಆದರೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವುದರಿಂದ ಬಂಡವಾಳಶಾಹಿಗಳು, ಉದ್ದಿಮೆದಾರರಿಗೆ ಅನುಕೂಲ ಆಗುತ್ತದೆಯೇ ಹೊರತು ಜನಸಾಮಾನ್ಯರಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಹಾಗಾಗಿ ಸರ್ಕಾರವೇ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂದರು.
ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವುದರಿಂದ ಬಂಡವಾಳಗಾರರು ಬಂಡವಾಳ ಹೂಡಲು ಅನುಕೂಲ ಆಗುತ್ತದೆ. ಜನಸಾಮಾನ್ಯರಿಗೆ ದೊರೆಯಬೇಕಾದ ಸೌಲಭ್ಯಗಳು ಉಚಿತವಾಗಿ ದೊರೆಯುವ ಮಾತೇ ಇರುವುದಿಲ್ಲ. 2 ಲಕ್ಷ ಕೋಟಿ ಬಜೆಟ್ ಹೊಂದಿರುವ ರಾಜ್ಯ ಸರ್ಕಾರವೇ ಕಾಲೇಜು ಪ್ರಾರಂಭಿಸಲು ಯಾವುದೇ ಸಮಸ್ಯೆ ಇಲ್ಲ. ಹಾಗಾಗಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಆಗಬೇಕು ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಗತ್ಯವಾದ ಜಮೀನು ಹಾಗೂ 500ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇದೆ. ಈಗಾಗಲೇ ಅನೇಕ ವರ್ಷದಿಂದ ಜಿಲ್ಲಾ ಆಸ್ಪತ್ರೆ ನಡೆಯುತ್ತಿದೆ. ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಎಲ್ಲ ಅಗತ್ಯ ಸೌಲಭ್ಯಗಳಿವೆ. ಹಾಗಾಗಿ ಖಾಸಗಿ ಸಹಭಾಗಿತ್ವ ಬೇಡವೇ ಬೇಡ ಎಂದು ತಿಳಿಸಿದರು. ಜು. 10 ರಂದು ದಾವಣಗೆರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ವೈದ್ಯಕೀಯ ಕಾಲೇಜು ಪ್ರಾರಂಭದ ಬಗ್ಗೆ ವಿಸ್ಕೃತ ವರದಿ ಪಡೆಯುವುದಾಗಿ ತಿಳಿಸಿದ್ದಾರೆ.
ಅದರರ್ಥ ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಇನ್ನೂ ಮಂಜೂರು ಆಗಿಲ್ಲ. ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭದ ವಿಷಯ ಸೇರಿಸಬೇಕು ಇಲ್ಲವೇ ಸಚಿವ ಸಂಪುಟ ಶೀಘ್ರವೇ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಒಪ್ಪಿಗೆ ನೀಡಬೇಕು. ಸಂಪುಟ ಸಭೆ ಒಪ್ಪಿಗೆ ನೀಡಿದರೂ ಭಾರತೀಯ ವೈದ್ಯಕೀಯ ಮಂಡಳಿ ಅನುಮತಿ ನೀಡುವುದು ಕಷ್ಟ. ಆ ನಿಟ್ಟಿನಲ್ಲೂ ಸರ್ಕಾರ ಪ್ರಯತ್ನ ಮಾಡಬೇಕು ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಆದಷ್ಟು ಬೇಗ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಶಂಕುಸ್ಥಾಪನೆಯ ಬದಲಿಗೆ ಉದ್ಘಾಟನೆ ಮಾಡುವುದೇ ಸೂಕ್ತ. ವೈದ್ಯಕೀಯ ಕಾಲೇಜಿನ ವಿಸ್ಕೃತ ವರದಿ ಕಾಮಗಾರಿ ಅಂದಾಜು ವೆಚ್ಚ ತಯಾರಿಸಿ, ಟೆಂಡರ್ ಕರೆದು ಗುತ್ತಿಗೆದಾರರ ನಿಗದಿಪಡಿಸಿದ ನಂತರವೇ ಕಾಮಗಾರಿ ಉದ್ಘಾಟನೆ ಮಾಡಬೇಕು ಎಂದು ಒತ್ತಾಯಿಸಿದು.
ಧನ್ಯಕುಮಾರ್ ಬಗ್ಗೇನಹಳ್ಳಿ, ಅಜ್ಜಯ್ಯ ಮೆದಿಕೆರನಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.