ದಾವಣಗೆರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜು. 15 ರಂದು ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚೌಹಾಣ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಬೆಳಗ್ಗೆ 10.:30ಕ್ಕೆ ಸೂರಗೊಂಡನಕೊಪ್ಪಕ್ಕೆ ಆಗಮಿಸುವ ಡಿ.ಕೆ. ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಸಮಾಜದ ಶಾಸಕರು, ಜನಪ್ರತಿನಿಧಿಗಳು, ಮುಖಂಡರೊಡನೆ ಸಮಾಜದ ಸಮಸ್ಯೆ, ಬೇಡಿಕೆ, ಪರಿಹಾರ ಇತರೆ ವಿಚಾರಗಳ ಬಗ್ಗೆ ಸಂವಾದ ನಡೆಸುವರು.
ಸೂರಗೊಂಡನಕೊಪ್ಪದ ಕಾರ್ಯಕ್ರಮ ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಬಂಜಾರ ಸಮುದಾಯದ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಡಿ.ಕೆ. ಶಿವಕುಮಾರ್‌ರವರು ಸೇವಾಲಾಲ್ ಸ್ವಾಮೀಜಿಯವರ ದರ್ಶನ ಪಡೆದ ನಂತರ ಕೊರೊನಾದಿಂದ ಮೃತಪಟ್ಟಿರುವ ಬಂಜಾರ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯಕ್ರಮವಿದೆ. ಸೂರಗೊಂಡನಕೊಪ್ಪದ ನಂತರ ಶಿಕಾರಿಪುರ ತಾಲೂಕಿನ ಕಂಚುಗಾರನಹಳ್ಳಿ ತಾಂಡಾಕ್ಕೆ ಭೇಟಿ ನೀಡುವರು. ಬಂಜಾರ ಸಮಾಜ ಅತಿ ಹೆಚ್ಚಿರುವ ಶಿವಮೊಗ್ಗ, ವಿಜಯಪುರ, ಕಲಬುರುಗಿ, ಬಾಗಲಕೋಟೆ ಇತರೆಡೆ ಪ್ರವಾಸ ಮಾಡುವರು.
ಕಲಬುರಗಿಯಲ್ಲಿ ಸಾಂತ್ವನ ಯಾತ್ರೆ ಮುಗಿಯಲಿದೆ ಎಂದು ತಿಳಿಸಿದರು. ಬಂಜಾರ ಸಮುದಾಯ ಸಾಕಷ್ಟು ಸಮಸ್ಯೆಯಲ್ಲಿದೆ. ಮುಖ್ಯವಾಗಿ ತಾಂಡಾಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ದೊರೆಯುತ್ತಿರುವುದು ಸಾಕಷ್ಟು ವಿಳಂಬವಾಗುತ್ತಿದೆ. ಎಸ್.ಎಂ. ಕೃಷ್ಣ ಅವರ ಮಂತ್ರಿಮಂಡಲದಲ್ಲಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.
ಮಾಜಿ ಸಚಿವ ಕೆ. ಶಿವಮೂರ್ತಿ ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಪಟ್ಟರು. ರಾಜ್ಯದಲ್ಲಿ ನ 5,600ಕ್ಕೂ ಹೆಚ್ಚು ತಾಂಡಾಗಳಲ್ಲಿ 2,800 ತಾಂಡಾಗಳು ಕಂದಾಯ ಗ್ರಾಮಗಳಾಗಿವೆ. ಕಂದಾಯ ಗ್ರಾಮಗಳಾ ದಲ್ಲಿ ತಾಂಡಾಗಳಿಗೆ ಅಭಿವೃದ್ಧಿಗೆ ಅನುದಾನ, ಆರೋಗ್ಯ, ಶಿಕ್ಷಣ, ಮೂಲ ಸೌಲಭ್ಯ ದೊರೆಯಲಿವೆ.
ತ್ವರಿತಗತಿಯಲ್ಲಿ ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಕಂದಾಯ ಸಚಿವರ ನಿವಾಸದ ಎದುರು ಒಂದು ದಿನದ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಕೊರೊನಾ ಕಡಿಮೆಯಾದ ನಂತರ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಮನೋಹರ ಐನಾಪುರ, ಎಸ್. ನಂಜಾ ನಾಯ್ಕ, ಕಾಶೀನಾಥ ನಾಯ್ಕ, ಕುಬೇರ ನಾಯ್ಕ, ಜೆ.ಆರ್. ಮೋಹನ್ ಕುಮಾರ್, ನಾಗರಾಜ ನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.