ದಾವಣಗೆರೆ: ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿ ನಿರ್ದೇಶಕ ತೇಜಸ್ವಿ ಪಟೇಲ್ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಳೆಗಾಲದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದಿರುವ ಕಾರಣ ಮುಂದಿನ ದಿನಗಳ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತದೃಷ್ಟಿಯಿಂದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಸರ್ಕಾರಕ್ಕೆ ಪತ್ರ ಬರೆದು ನೀರು ಹರಿಸುವುದನ್ನು ನಿಲ್ಲಿಸಲು ಕೋರಿದ್ದಾರೆ.
ಆದರೂ ಸರ್ಕಾರ ನೀರು ಹರಿಸುವಂತೆ ಸೂಚನೆ ನೀಡಿರುವುದು ಸರಿಯಲ್ಲ ಎಂದರು. ಸರ್ಕಾರ ಜು. 7 ರಿಂದ ಅಕ್ಟೋಬರ್ 15 ರವರೆಗೆ ನೀರು ಹರಿಸಲು ಸೂಚಿಸಿದೆ. ನೀರಾವರಿ ಇಲಾಖೆಯ ಸಲಹಾ ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳದೆ ಸರ್ಕಾರ ಏಕಾಏಕಿ ನೀರು ಹರಿಸಲು ಹೇಳಿರುವುದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಸೃಷ್ಟಿಸಿದೆ. ಮುಖ್ಯಮಂತ್ರಿಯವರು ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಲು ಆದೇಶ ನೀಡಬೇಕು ಎಂದರು.
ಈ ವರ್ಷ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆ ಸೇರಿ ನೀರು ಬಿಡಲು ತೀರ್ಮಾನಿಸಿಲ್ಲ. ಭದ್ರಾ ಮೇಲ್ದಂಡೆಗೆ ನೀರು ಹರಿಸುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಕೋವಿಡ್ ಸಂದರ್ಭದಲ್ಲೂ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ನೀರು ಬಿಡುವ ಬಗ್ಗೆ ಜು. 15 ರಂದು ನಡೆಯುವ ನೀರು ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವಿಕೆ ನಿಲ್ಲಿಸುವಂತೆ ಅಚ್ಚುಕಟ್ಟು ವ್ಯಾಪ್ತಿಯ ಜನಪ್ರತಿನಿಧಿಗಳು ಮುಖ್ಯಮಂತ್ರಿಯವರ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿಯ ಇನ್ನೋರ್ವ ನಿರ್ದೇಶಕ ಗಿರೀಶ್ ಮುದೇಗೌಡ್ರ ಮಾತನಾಡಿ, ಭದ್ರಾ ಜಲಾಶಯದಲ್ಲಿ ಈಗ 155.9 ಅಡಿ ನೀರು ಸಂಗ್ರಹವಾಗಿದೆ. ಹಾಲಿ 39.086 ಟಿಎಂಸಿ ಇದ್ದು, ಡೆಡ್ ಸ್ಟೋರೇಜ್ 13.832 ಮತ್ತು ಬೇಸಿಗೆ ಕುಡಿಯುವ ನೀರು ಏಳು ಟಿಎಂಸಿ ಕಳೆದರೆ 18.254 ಟಿಎಂಸಿ ಇದೆ. ಭದ್ರಾ ಮೇಲ್ದಂಡೆಗೆ 12.5 ಟಿಎಂಸಿ ನೀರು ಕೊಟ್ಟರೆ 8.332 ಟಿಎಂಸಿ ನೀರನ್ನು 28 ದಿನಗಳಿಗೆ ಮಾತ್ರ ಹರಿಸಬಹುದು. ಜಲಾಶಯದಲ್ಲಿ ನೀರು ಕಡಿಮೆಯಾದರೆ ದಾವಣಗೆರೆ ಭಾಗದ ರೈತರಿಗೆ ನೀರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ತುಂಗಾದಿಂದ ಮೊದಲು ನೀರು ಎತ್ತುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಕಾರ್ಯ ಮಾಡಲಿ. ಬಳಿಕವಷ್ಟೇ ಭದ್ರಾ ಮೇಲ್ದಂಡೆಯ ಕಾಲುವೆಗಳಿಗೆ ನೀರು ಹರಿಸಲಿ. ನೀರು ಹರಿಸುವಿಕೆ ನಿಲ್ಲಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ, ನಿರ್ದೇಶಕ ಗಿರೀಶ್ ಮುದೇಗೌಡ್ರ, ಜಿ.ಎಸ್. ದೇವೇಂದ್ರಪ್ಪ, ಎ.ಬಿ. ಕರಿಬಸಪ್ಪ, ಹನುಮಂತ ರೆಡ್ಡಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.