Advertisement

ಕನಕದಾಸ ವೃತ್ತ ನಿರ್ಮಾಣಕ್ಕೆ ವಿರೋಧ ಸಲ್ಲ: ಮಂಜುನಾಥ

09:12 PM Jul 11, 2021 | Team Udayavani |

ದಾವಣಗೆರೆ: ಕೊಪ್ಪಳ ಬಸ್‌ ನಿಲ್ದಾಣದ ಎದುರು ಕನಕದಾಸ ವೃತ್ತ ನಿರ್ಮಾಣ ಹಾಗೂ ಕನಕಮೂರ್ತಿ ಸ್ಥಾಪನೆಗೆ ಸಂಸದ ಸಂಗಣ್ಣ ಕರಡಿ ಅಡ್ಡಿಪಡಿಸುತ್ತಿರುವುದನ್ನು ಜಿಲ್ಲಾ ಪ್ರದೇಶ ಕುರುಬರ ಯುವ ಘಟಕ ಖಂಡಿಸುತ್ತದೆ ಎಂದು ಘಟಕದ ಅಧ್ಯಕ್ಷ ಇಟ್ಟಿಗುಡಿ ಮಂಜುನಾಥ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಬಸ್‌ ನಿಲ್ದಾಣ ಎದುರು ಕನಕ ಮೂರ್ತಿ ಸ್ಥಾಪನೆ ವಿಚಾರವಾಗಿ ಸಂಸದ ಸಂಗಣ್ಣ ಕರಡಿಯವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು, ಕನಕಮೂರ್ತಿ ಸ್ಥಾಪನೆಗೆ ಅನುಮತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ತನ್ಮೂಲಕ ಕನಕ ವೃತ್ತ ಹಾಗೂ ಕನಕಮೂರ್ತಿ ಪ್ರತಿಷ್ಠಾಪನೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೊಪ್ಪಳದಲ್ಲಿ 1988ರಲ್ಲಿ ಸಿದ್ದರಾಮಯ್ಯನವರು ಸಾರಿಗೆ ಸಚಿವರಾಗಿದ್ದ ವೇಳೆ ಬಸ್‌ ನಿಲ್ದಾಣದ ಎದುರಿನ ವೃತ್ತವನ್ನು ಕನಕದಾಸ ವೃತ್ತ ಎಂದು ನಾಮಕರಣ ಮಾಡಿದ್ದರು. ಅದರಂತೆ, ನಗರಸಭೆಯಲ್ಲಿಯೂ ಆ ವೃತ್ತದಲ್ಲಿ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಠರಾವು ಮಾಡಲಾಗಿತ್ತು. ಆದರೆ, ಕೆಲ ಕಾರಣಕ್ಕೆ ಪುತ್ಥಳಿ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಕುರುಬ ಸಮಾಜದ ಮುಖಂಡರು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ ಪುತ್ಥಳಿ ನಿರ್ಮಾಣಕ್ಕೆ ಹೆಚ್ಚುವರಿ ಜಾಗ ಬಳಸಿಕೊಳ್ಳುತ್ತಿದ್ದು, ಅದನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಇದರ ಹಿಂದೆ ದಾಸಶ್ರೇಷ್ಠ ಕನಕದಾಸರ ಪುತ್ಥಳಿ ನಿರ್ಮಾಣ ಕಾರ್ಯ ತಡೆಯುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

ಸಂಸದ ಕರಡಿ ಸಂಗಣ್ಣ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಯಾವುದೇ ಅಡ್ಡಿ ಮಾಡದೇ, ಪುತ್ಥಳಿ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಹೆಚ್ಚುವರಿ ಜಾಗವನ್ನು ಪುತ್ಥಳಿ ನಿರ್ಮಾಣಕ್ಕೆ ಮಂಜೂರು ಮಾಡಿಸಿಕೊಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪ್ರದೇಶ ಕುರುಬ ಯುವ ಘಟಕದ ಪದಾಧಿಕಾರಿಗಳಾದ ಎಸ್‌.ಟಿ.ಅರವಿಂದ, ಕೆ.ರೇವಣ್ಣ, ಬಿ.ಲಿಂಗರಾಜ, ಬೀರೇಶ್‌, ರವಿ ಡಾಬಾ, ಪರಮೇಶ್‌ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next