Advertisement

ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಶೀಘ್ರ ಮುಗಿಸಿ

09:09 PM Jul 11, 2021 | Team Udayavani |

ದಾವಣಗೆರೆ: ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ 100 ಹಾಸಿಗೆ ಸಾಮರ್ಥ್ಯದ ತಾಯಿ-ಮಕ್ಕಳ ಆಸ್ಪತ್ರೆ ಕಟ್ಟಡ ಮುಂದಿನ ಸಂಕ್ರಾಂತಿ ಹಬ್ಬದ ವೇಳೆಗೆ ಉದ್ಘಾಟನೆಗೆ ಸಿದ್ಧವಾಗಿರಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌, ಅಧಿಕಾರಿಗಳಿಗೆ ಆದೇಶ ನೀಡಿದರು.

Advertisement

ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ತಾಯಿ-ಮಕ್ಕಳ ಆಸ್ಪತ್ರೆ ಹಾಗೂ ಟ್ರಾಮಾ ಕೇರ್‌ ಸೆಂಟರ್‌ ಕಟ್ಟಡ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಅವರು ಮಾತನಾಡಿದರು. ತಾಯಿ, ಮಕ್ಕಳ ಆರೈಕೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 15 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿತ್ತು.ಅದರಲ್ಲಿ ಈಗಾಗಲೇ 12 ತಿಂಗಳು ಕಳೆದಿದ್ದು, ಇನ್ನೂ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಗುತ್ತಿಗೆದಾರರು, ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ ಕಾರ್ಮಿಕರ ಕೊರತೆ, ಕಟ್ಟಡ ಸಾಮಗ್ರಿ ಅಲಭ್ಯತೆ ಸೇರಿದಂತೆ ಇನ್ನಿತರ ಕಾರಣಕ್ಕೆ ಕಟ್ಟಡ ನಿರ್ಮಾಣ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ, ಕಾರ್ಮಿಕರ ಹಾಗೂ ಸಾಮಗ್ರಿಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರಲಿಲ್ಲ.

ಅಲ್ಲದೆ ಆಸ್ಪತ್ರೆ ಕಟ್ಟಡ ಅತ್ಯಂತ ಅವಶ್ಯಕ ಕ್ಷೇತ್ರದ ನಿರ್ಮಾಣ ಕಾಮಗಾರಿಯಾಗಿದ್ದು, ನೀವು ನೀಡುವ ಕಾರಣ ಸಮಂಜಸವಾಗಿಲ್ಲ. ಆದಾಗ್ಯೂ ಇನ್ನು ಆರು ತಿಂಗಳ ಒಳಗಾಗಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡು ಸಂಕ್ರಾಂತಿ ಹಬ್ಬದ ವೇಳೆಗೆ ಉದ್ಘಾಟನೆಗೆ ಸಿದ್ಧವಾಗಿರಬೇಕು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ಲೋಪ ದೋಷಗಳು ಕಂಡುಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವೈದ್ಯಕೀಯ ಕಾಲೇಜಿಗೆ ಸ್ಥಳ ಪರಿಶೀಲನೆ: ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣ ಮಾಡಲು ಸಚಿವರು ಸ್ಥಳ ಪರಿಶೀಲನೆ ನಡೆಸಿದರು. ಜಿಲ್ಲಾ ಆಸ್ಪತ್ರೆ ಆವರಣದ ಸಂಪೂರ್ಣ ನಕ್ಷೆ, ಪ್ರಸ್ತಾವಿತ ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಹಾಗೂ ಜಯದೇವ ಹೃದ್ರೋಗ ಉಪ ಕೇಂದ್ರಕ್ಕೆ ನಿಗದಿಪಡಿಸಿರುವ ನಿವೇಶನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ದಾವಣಗೆರೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸುವುದು ಶತಃಸಿದ್ಧ. ಈ ನಿಟ್ಟಿನಲ್ಲಿ ಭೂಮಿ ಗುರುತಿಸಿ ನಕ್ಷೆ ಸಹಿತ ವರದಿ ಸಲ್ಲಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಶೀಘ್ರವೇ ಅನುಮೋದನೆ ಪಡೆದು ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಎಸ್‌.ವಿ. ರಾಮಚಂದ್ರ, ಪ್ರೊ| ಲಿಂಗಣ್ಣ, ಜಿಪಂ ಸಿಇಒ ಡಾ| ವಿಜಯ ಮಹಾಂತೇಶ್‌, ಡಿಎಚ್‌ಒ ಡಾ| ನಾಗರಾಜ್‌, ಜಿಲ್ಲಾ ಸರ್ಜನ್‌ ಡಾ| ಜಯಪ್ರಕಾಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next