ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಆವರೆಗೆರೆ ಸರ್ವೇ ನಂಬರ್ 220/22 ಮತ್ತು 220/23ರಲ್ಲಿ ಪಾಲಿಕೆ ಅಕ್ರಮವಾಗಿ ಬಡಾವಣೆ ನಿರ್ಮಿಸಿದೆ ಎಂಬ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಎಸ್ .ಟಿ. ವಿರೇಶ್ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಮಹಾನಗರಪಾಲಿಕೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬಡಾವಣೆ ಅಭಿವೃದ್ಧಿ ಪಡಿಸುವ ಹೊಣೆ ದೂಡಾಕ್ಕೆ ಇರುತ್ತದೆ. ಖಾಸಗಿ ಬಡಾವಣೆ ನಿರ್ಮಿಸುವವರು ದೂಡಾದಿಂದ ಅನುಮತಿ ಪಡೆದು ಬಡಾವಣೆ ಅಭಿವೃದ್ಧಿಪಡಿಸಿದ ನಂತರ ಅಲ್ಲಿ ನಿರ್ಮಿಸಿರುವ ನಾಗರಿಕ ಸೌಲಭ್ಯದ ಬಗ್ಗೆ ಬೆಸ್ಕಾಂ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಎನ್‌ಒಸಿ ನೀಡುತ್ತಾರೆ.
ಇದಾದ ಬಳಿಕ ದೂಡಾ ಅಧಿಕಾರಿಗಳು ಪರೀಶೀಲನೆ ನಡೆಸಿ ಬಡಾವಣೆಗೆ ಅಂತಿಮ ವಿನ್ಯಾಸ ನೀಡುತ್ತಾರೆ. ಹೀಗೆ ಶೇ. 91ರಷ್ಟು ಕೆಲಸ ಮುಗಿದ ಬಳಿಕ ಪಾಲಿಕೆ ಡೋರ್ ನಂಬರ್ ನೀಡಿ ನಿವೇಶನದಾರರ ಹೆಸರಿಗೆ ಖಾತೆ ಮಾಡುವ ಕೆಲಸ ಮಾಡುತ್ತದೆ. ಇದರ ಬಗ್ಗೆ ಅರಿವಿಲ್ಲದ ಕಾಂಗ್ರೆಸ್ ಸದಸ್ಯರು ಪಾಲಿಕೆ ವಿರುದ್ಧ ವಿನಾಕಾರಣ ಆರೋಪ ಮಾಡಿದ್ದಾರೆ ಎಂದರು.
ಮರುವಿನ್ಯಾಸಕ್ಕೆ ಅವಕಾಶವಿದೆ: ಆವರಗೆರೆ ಬಡಾವಣೆಯ ನಿವಾಸಿಗಳು ಮುಖ್ಯ ರಸ್ತೆಯಿಂದ ಸಂಪರ್ಕ ರಸ್ತೆ ಇಲ್ಲದಿರುವುದರಿಂದ ಸ್ಥಳೀಯ ಪಾಲಿಕೆ ಸದಸ್ಯರು, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್‌ಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರು ಪಾಲಿಕೆಗೆ ಪತ್ರ ಬರೆದ ಕಾರಣ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸಂಪರ್ಕ ರಸ್ತೆ ಇಲ್ಲದಿರುವುದು ಗಮನಕ್ಕೆ ಬಂದ ಕಾರಣ ಮರು ವಿನ್ಯಾಸ ಮಾಡುವಂತೆ ದೂಡಾಕ್ಕೆ ಪತ್ರ ಬರೆದಿದ್ದೇವೆ. ಮರುವಿನ್ಯಾಸ ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.
ಕೊರೊನಾ ಕಾರಣದಿಂದ ತೆರಿಗೆ ಸಂಗ್ರಹದಲ್ಲಿ ಸ್ವಲ್ಪ ಹಿನ್ನಡೆಯಾಗಿತ್ತು. ಜೂನ್ ತಿಂಗಳಿಂದ ಸಾರ್ವಜನಿಕರು ತೆರಿಗೆ ತುಂಬಲು ಮುಂದೆ ಬರುತ್ತಿದ್ದಾರೆ. ಶೇ.5ರ ರಿಯಾಯಿತಿಯನ್ನು ಹಾಗೂ ದಂಡರಹಿತ ತೆರಿಗೆ ಪಾವತಿಯ ಅವಧಿಯನ್ನು ವಿಸ್ತರಿಸಲಾಗಿದೆ.
ಹಂದಿ ಸಮಸ್ಯೆ ಕುರಿತು ಎರಡು ದಿನಗಳಲ್ಲಿ ಹಂದಿ ಮಾಲೀಕರ ಸಭೆ ಕರೆದು ಹಂದಿ ಸ್ಥಳಾಂತರಿಗೆ ಮನವರಿಕೆ ಪ್ರಯತ್ನ ಮಾಡಲಾಗುವುದು ಎಂದರು.