ದಾವಣಗೆರೆ: ಕೊರೊನಾದಿಂದ ಮೃತಪಟ್ಟವರ ಬಗ್ಗೆ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದರು. ಪೆಟ್ರೋಲ್-ಡೀಸೆಲ್,ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಬುಧವಾರ ಜಿಲ್ಲಾ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೂವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಮಾಹಿತಿ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಮಾಹಿತಿ ಪಡೆದಾಗ ಸತ್ತಿದ್ದು 36 ಜನ ಎಂಬುದು ಗೊತ್ತಾಯಿತು. ಸರ್ಕಾರ ಈ ರೀತಿ ಸಾವಿನ ಬಗ್ಗೆಯೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಅತಿ ಮುಖ್ಯವಾಗಿ ಬಳಸುವ ಟ್ರಾÂಕ್ಟರ್, ಪವರ್ ಟಿಲ್ಲರ್‌ಗಳಿಗೆ ಬೇಕಾದ ಡೀಸೆಲ್ ಬೆಲೆ ನೂರು ರೂಪಾಯಿ ದಾಟುತ್ತಿದೆ. ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಎಲ್ಲ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಪಕ್ಷ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಕಷ್ಟದಲ್ಲಿ ಇರುವಂತಹವರಿಗೆ ಅಗತ್ಯ ನೆರವು ನೀಡುವುದು ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಬದ್ಧತೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಅಭಿಲಾಷೆಯಂತೆ ನಾವು ಕೊರೊನಾದಿಂದ ಮೃತಪಟ್ಟವರ ಮನೆಗೆ ಹೋಗಿ ಸಾಂತ್ವನ ಹೇಳಿ ಕೈಲಾದಷ್ಟುನ ನೆರವು ನೀಡುವ ಕೆಲಸ ಮಾಡುತ್ತಿದ್ದೇವೆ. ನಾನು ಕೋಲಾರದಲ್ಲಿ ಈ ಕಾರ್ಯಕ್ರಮ ಪ್ರಾರಂಭಿಸಿದ್ದೇನೆ. ಮಾಜಿ ಸಚಿವ ಮಲ್ಲಿಕಾರ್ಜುನ್ ರವರು ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
ದೇಶದಲ್ಲಿ ಯಾವುದೇ ಜನಪ್ರತಿನಿಧಿ ಉಚಿತವಾಗಿ ಇಡೀ ಕ್ಷೇತ್ರದ ಜನರಿಗೆ ಕೊರೊನಾ ಲಸಿಕೆ ನೀಡಿದ ಉದಾಹರಣೆ ಇಲ್ಲ. ಅಂತಹ ಕೆಲಸವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಪೆಟ್ರೋಲ್ ಡೀಸೆಲ್, ಅಡುಗೆ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಲೀಟರ್ ಪೆಟ್ರೋಲ್ ಬೆಲೆ 105-108 ರೂಪಾಯಿ ಆಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಬೆಲೆ ನಿಯಂತ್ರಣ ಮಾಡಬೇಕಾದ ಕಾಂಗ್ರೆಸ್ ಸರ್ಕಾರ ಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಉಸ್ತುವಾರಿ ಗುರಪ್ಪ ನಾಯ್ಡು, ನಗರಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಅನಿತಾಬಾಯಿ ಮಾಲತೇಶ್, ಡಿ. ಬಸವರಾಜ್, ಕೆ.ಎಸ್. ಬಸವಂತಪ್ಪ, ಅಬ್ದುಲ್ ಲತೀಫ್, ಜೆ.ಡಿ. ಪ್ರಕಾಶ್, ಕೆ. ಚಮನ್ ಸಾಬ್, ಜಿ.ಎಸ್. ಮಂಜುನಾಥ್, ವಿನಾಯಕ ಪೈಲ್ವಾನ್, ಸುಧಾ ಮಂಜುನಾಥ್ ಇತರರು ಇದ್ದರು.