ದಾವಣಗೆರೆ : ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾತಿಗೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಮನವಿ ಮಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ ಎನ್ನುತ್ತಾರೆ. ಕಾಂಗ್ರೆಸ್‌ನವರು ಅದನ್ನು ಸ್ವಾಗತಿಸುತ್ತಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ವಿಚಾರವಾಗಿ ಉಭಯ ಪಕ್ಷಗಳು ಹೇಳಿಕೆ ನೀಡುತ್ತಾರೆ. ವಾಸ್ತವವಾಗಿ ದಾಖಲೆ ಆಧಾರದಲ್ಲಿ ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಆಗಿಯೇ ಇಲ್ಲ ಎಂದರು.
ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾತಿಗೆ ಕೋರಿ ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯನಾಗಿ ನಾನು ಮನವಿ ಸಲ್ಲಿಸಿದ್ದೇನೆ. ನನಗೆ ಮೇ 27 ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೀಡಿರುವ ಮಾಹಿತಿಯಂತೆ ದಾವಣಗೆರೆಗೆ ಕಾಲೇಜು ಮಂಜೂರು ಆಗಿಲ್ಲ ಎಂದು ತಿಳಿಸಿದರು.
ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾತಿಗೆ ಕೋರಿ ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳು ಮನವಿ ಸಲ್ಲಿಸಿಲ್ಲ. ನನ್ನನ್ನೂ ಒಳಗೊಂಡಂತೆ 15 ಜನರು ಮನವಿ ಸಲ್ಲಿಸಿದ್ದೇವೆ. ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಮಂಜೂರಾತಿ ಆಗಿರುವುದನ್ನು ಹೊರತುಪಡಿಸಿ ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾಲೇಜು ಪ್ರಾರಂಭಿಸುವುದು ಕಷ್ಟಸಾಧ್ಯ. ಮನವಿಯನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಕಳಿಸಲಾಗುವುದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ ಎಂದು ಪ್ರತಿಯನ್ನು ಪ್ರದರ್ಶಿಸಿದರು.
ಲಭ್ಯವಿರುವ ಮಾಹಿತಿ ಪ್ರಕಾರ ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಆಗಿಲ್ಲ. ಈಗ ಏನಾದರೂ ಮಂಜೂರಾತಿ ಆಗಿದ್ದರೆ ಅದಕ್ಕಿಂತಲೂ ಸಂತೋಷದ ವಿಷಯ ಇನ್ನೊಂದಿಲ್ಲ. ಒಂದೊಮ್ಮೆ ಮಂಜೂರು ಆಗದೇ ಇದ್ದಲ್ಲಿ ಮಂಜೂರಾತಿಗೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೇ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು, ಆಸಕ್ತರು ಒಳಗೊಂಡಂತೆ ಸರ್ವ ಪಕ್ಷ ನಿಯೋಗವನ್ನ ಮುಖ್ಯಮಂತ್ರಿಗಳ ಬಳಿಗೆ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದರು.
ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗದೇ ಇರುವ ಬಗ್ಗೆ ನಾನು ಯಾರ ಬಗ್ಗೆಯೂ ಮಾತನಾಡಲಿಕ್ಕೆ ಹೋಗುವುದಿಲ್ಲ. ವಿರೋಧವನ್ನೂ ಮಾಡುವುದಿಲ್ಲ. ಉಭಯ ಪಕ್ಷಗಳ ಕಾರ್ಯಕರ್ತರು ದಾಖಲೆ ಆಧಾರದಲ್ಲಿ ಹೇಳಿಕೆ ನೀಡಬೇಕೇ ಹೊರತು ಯಾರನ್ನೋ ಮೆಚ್ಚಿಸಲು ಜನರ ದಾರಿ ತಪ್ಪಿಸುವಂತಹ ಹೇಳಿಕೆ ನೀಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾತಿಗೆ ಸಾಕಷ್ಟು ಪ್ರಯತ್ನ ಮಾಡಬೇಕು. ಮುಂದಿನ ಫೆಬ್ರವರಿ ಇಲ್ಲವೇ ಮಾರ್ಚ್‌ನಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಘೋಷಣೆ ಆಗಬೇಕು. ಇಲ್ಲವೇ ಜನವರಿಯಲ್ಲಿನ ಪೂರಕ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭದ ವಿಷಯ ಸೇರ್ಪಡೆ ಮಾಡಬೇಕು ಎಂದು ಹೇಳಿದರು.
ಕಲಬುರಗಿಯಲ್ಲಿ ಕಾರ್ಮಿಕ ಇಲಾಖೆಯ ಅತ್ಯಾಧುನಿಕ ಸೌಲಭ್ಯದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದೆ. ಕಲಬುರಗಿಂತಲೂ ಹೆಚ್ಚಿನ ಕಾರ್ಮಿಕರು ಇರುವಂತಹ ದಾವಣಗೆರೆಯಲ್ಲಿ ಆಗಬೇಕಿತ್ತು. ಇಚ್ಛಾಶಕ್ತಿ ಕೊರತೆ ಮತ್ತಿತರ ಕಾರಣಗಳಿಂದ ಆಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಮ್ಮದೇ ನೇತೃತ್ವದಲ್ಲಿ ಕೇಂದ್ರದ ಕಾರ್ಮಿಕ ಇಲಾಖೆ ಸಚಿವರ ಬಳಿಗೆ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಬೇಕು ಎಂದರು.
ಚಟ್ನಿಹಳ್ಳಿ ಜಬೀವುಲ್ಲಾ ಸುದ್ದಿಗೋಷ್ಠಿಯಲ್ಲಿದ್ದರು.