ದಾವಣಗೆರೆ: ರಾಜ್ಯದಲ್ಲಿ ಚಂಬಲ್ ಕಣಿವೆಯನ್ನೂ ನಾಚಿಸುವಂತೆ ಕಾನೂನುಬದ್ಧ ಡಕಾಯಿತಿ ನಡೆಯುತ್ತಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂಬಲ್ ಕಣಿವೆಯಲ್ಲಿ ಕಾನೂನಿಗೆ ವಿರುದ್ಧ ಡಕಾಯತಿ ನಡೆಯತ್ತಿದ್ದರೆ, ರಾಜ್ಯದಲ್ಲಿ ಕಾನೂನುಬದ್ಧವಾಗಿಯೇ ಡಕಾಯತಿ ನಡೆಯುತ್ತಿದೆ ಎಂದು ದೂರಿದರು.
ಬಿಜೆಪಿಯ ನಾಯಕರೇ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 20 ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ. ವಿಜಯಪುರ ನಗರ ಶಾಸಕ ಬಸವನಗೌಡ ಯತ್ನಾಳ್ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ, ಸ್ವತಃ ಮುಖ್ಯಮಂತ್ರಿಗಳ ಪುತ್ರ ಸಚಿವರೊಬ್ಬರ ಪಿಎ ಮೇಲೆ ದೂರು ನೀಡಿದ್ದಾರೆ. ಆಪ್ತ ಸಹಾಯಕನ ಮೇಲೆ ದೂರು ನೀಡಿದರೆ ಸಚಿವರ ಮೇಲೆಯೇ ದೂರು ನೀಡಿದಂತಾಗುತ್ತದೆ ಎಂದರು. ಬಿಜೆಪಿ ಆಡಳಿತದಿಂದ ರೋಸಿಹೋಗಿರುವ ಜನರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 100ಕ್ಕೆ 100 ರಷ್ಟು ತಕ್ಕ ಪಾಠ ಕಲಿಸಲಿದ್ದಾರೆ.
ಬಿಜೆಪಿ ಧೂಳಿಪಟವಾಗಲಿದೆ. ಕಾಂಗ್ರೆಸ್‌ಗೆ ಉಜ್ವಲ ಭವಿಷ್ಯ ಇದ್ದು, ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಪಕ್ಷಗಳು ಸರ್ಕಾರದೊಂದಿಗೆ ಒಂದಾಗಿವೆ ಎಂಬ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಕಾಂಗ್ರೆಸ್ ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷ. ಕೊರೊನಾ ನಿರ್ಮೂಲನೆಗಾಗಿ ಸರ್ಕಾರದೊಂದಿಗೆ ಕೈ ಜೋಡಿಸಿದೆ ಅಷ್ಟೇ. ಅವರು ಮಾಡುವ ತಪ್ಪು, ಲೋಪಗಳ ಬಗ್ಗೆ ಹೇಳಿ ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರದ ವಿರುದ್ಧ ಕಟಕಟೆಯಲ್ಲಿ ನಿಲ್ಲಿಸಿ, ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತೇವೆ.
ಸರ್ಕಾರದೊಂದಿಗೆ ಮಿಲಾಪಿ ಏನಿದೆ ಎಂದು ಪ್ರಶ್ನಿಸಿದರು. ನಾವು ಬಿಜೆಪಿಯವರಂತೆ ಕೋವಿಡ್ ನಿಯಮ ಉಲ್ಲಂಘನೆ ಮಾಡುವುದಿಲ್ಲ. ಕೋವಿಡ್ ನಿಯಮ ಪಾಲನೆ ಮಾಡಬೇಕಾಗಿರುವುದರಿಂದ ಜನರನ್ನು ಸೇರಿಸಿಕೊಂಡು ಹೋರಾಟ ಮಾಡಲಿಕ್ಕಾಗುವುದಿಲ್ಲ. ಬಿಜೆಪಿಯವರು ಮನೆಯಿಂದ ಹೊರಗೆ ಬರುವಾಗ ಕಾಂಗ್ರೆಸ್‌ನವರು ಇದ್ದಾರಾ ಎಂದು ನೋಡಿಕೊಂಡು ಬರುವಂತೆ ಪ್ರಖರವಾದ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರಾದ ಕೆ. ಚಮನ್ ಸಾಬ್, ಜಿ.ಎಸ್. ಮಂಜುನಾಥ್, ವಕ್ತಾರ ಎಂ. ನಾಗೇಂದ್ರಪ್ಪ, ಎಲ್.ಎಂ.ಎಚ್. ಸಾಗರ್, ಅಲಿ ರಹಮತ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.