ದಾವಣಗೆರೆ: ಮಹಾನಗರ ಪಾಲಿಕೆಯ 25ನೇ ವಾಡ್ ìನಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಲಾಗಿದ್ದ ಕೊರೊನಾ ಲಸಿಕಾಕರಣ ಶಿಬಿರಕ್ಕೆ ತಡೆಯೊಡ್ಡಿರುವುದಾಗಿ ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಮೇಯರ್ ಎಸ್.ಟಿ. ವೀರೇಶ್ ಸ್ಪಷ್ಟಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25ನೇ ವಾರ್ಡ್‌ನ ಲಸಿಕಾಕರಣ ಶಿಬಿರಕ್ಕೆ ಲಸಿಕೆ ತಡೆಯುವಲ್ಲಿ ತಮ್ಮ ಹಾಗೂ ಸಂಸದರ ಯಾವುದೇ ಪಾತ್ರವೂ ಇಲ್ಲ. ಆದರೂ ತಮ್ಮ ಹಾಗೂ ಸಂಸದರ ವಿರುದ್ಧ ಮಾಡಲಾಗಿರುವ ಆರೋಪ ಸುಳ್ಳು. ಸರ್ಕಾರಿ ಲಸಿಕೆಯನ್ನು ಖಾಸಗಿ ಬ್ಯಾನರ್‌ನಡಿ ನೀಡುವುದಕ್ಕೆ ತಾವು ಆಕ್ಷೇಪಣೆ ಮಾಡಿದ್ದಾಗಿ ತಿಳಿಸಿದರು. ಲಸಿಕಾಕರಣದ ಶಿಬಿರದ ಹಿಂದಿನ ದಿನದ ಸಂಜೆಯವರೆಗೆ ಸರ್ಕಾರಿ ಲಸಿಕೆಗಳನ್ನು ಖಾಸಗಿ ಬ್ಯಾನರ್ ನಡಿ ನೀಡುವ ಬಗ್ಗೆ ಮಾಹಿತಿ ಇರಲಿಲ್ಲ.
ಸಂಬಂಧಿಸಿದ ಅಧಿಕಾರಿಗಳಿಗೂ ಸಹ ಮಾಹಿತಿ ದೊರೆತಿರಲಿಲ್ಲ. ಸರ್ಕಾರದಿಂದ ನೀಡಲಾಗುವ ಲಸಿಕೆಯನ್ನು ಖಾಸಗಿ ಬ್ಯಾನರ್‌ನಡಿ ನೀಡಲಿಕ್ಕೆ ಆಗುತ್ತದೆಯೇ ಎಂಬುದಾಗಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾಗಿ ಹೇಳಿದರು. ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸ್ವಂತ ಹಣದಲ್ಲಿ ಲಸಿಕೆ ತರಿಸಿ, ಉಚಿತವಾಗಿ ನೀಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಸರ್ಕಾರದಿಂದ ಪೂರೈಕೆ ಆಗುವ ಲಸಿಕೆಯನ್ನು ಸ್ವಂತ ಬ್ಯಾನರ್‌ನಡಿ ನೀಡುವುದು ಸರಿ ಅಲ್ಲ ಎಂಬ ಸಾಮಾನ್ಯ ಜ್ಞಾನ ಕೆ.ಬಿ. ಬಡಾವಣೆಯಲ್ಲಿನ ಶಿಬಿರದ ಆಯೋಜಕರಿಗೆ ಇರಬೇಕಿತ್ತು. ಶಿಬಿರ ಸಂದರ್ಭದಲ್ಲಿ ಉಂಟಾದ ಗೊಂದಲಕ್ಕೆ ತಾವು, ಸಂಸದರು, ಬಿಜೆಪಿ ಕಾರಣ ಅಲ್ಲವೇ ಅಲ್ಲ. ಕಾಂಗ್ರೆಸ್‌ನವರದ್ದೇ ತಪ್ಪು. ಅವರೇ ಗೊಂದಲಕ್ಕೆ ಕಾರಣ ಎಂದರು.
ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಏನೂ ಕೆಲಸ ಮಾಡದೆ ಮನೆಯಲ್ಲಿ ಮಲಗಿದ್ದಂತಹ ಕೆ.ಜಿ. ಶಿವಕುಮಾರ್ ಈಗ ಮಾತನಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರೇನು ಮಾಡುತ್ತಿದ್ದರು ಎಂದು ನಾವು ಪ್ರಶ್ನಿಸಬೇಕಾಗುತ್ತದೆ. ಯಾವುದೇ ಕೆಲಸ ಮಾಡದೇ ಇದ್ದವರು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಅತ್ತು ಕರೆದು ಲಸಿಕೆ ತರುವ ಕೆಲಸ ಮಾಡುವಂತಹ ಪರಿಸ್ಥಿತಿಯಾಗಲೀ, ಸಂದರ್ಭವಾಗಲೀ ಇಲ್ಲ. ಅಧಿಕಾರ ಇದೆ, ಅದನ್ನು ಚಲಾಯಿಸಿ ಲಸಿಕೆ ತರುವ ಕೆಲಸ ಮಾಡುತ್ತೇನೆ. ನಮ್ಮ ವಾರ್ಡ್ ಜನರಿಗೆ ಲಸಿಕೆ ಕೊಡಿಸುವ ಜವಾಬ್ದಾರಿ ಇದೆ. ಎಲ್ಲರಿಗೂ ಆದ್ಯತೆ ಮೇರೆಗೆ ಲಸಿಕೆ ಕೊಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್ ಮಾತನಾಡಿ, ನಮ್ಮ 32ನೇ ವಾರ್ಡ್‌ನಲ್ಲೂ ಜೂ. 28 ರಂದು ಖಾಸಗಿ ಬ್ಯಾನರ್‌ನಡಿ ಸರ್ಕಾರಿ ಲಸಿಕೆ ನೀಡುವುದಕ್ಕೆ ಆಕ್ಷೇಪಣೆ ಮಾಡಲಾಗಿತ್ತು. ದೊಡ್ಡವರು ಒಳ್ಳೆಯ ಕೆಲಸ ಮಾಡು¤ತಾರೆ. ಆದರೆ ಅವರ ಹಿಂಬಾಲಕರು, ಕಾರ್ಯಕರ್ತರು ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸರ್ಕಾರದಿಂದ ಪೂರೈಕೆ ಆಗುವ ಲಸಿಕೆಯನ್ನು ಖಾಸಗಿ ಬ್ಯಾನರ್‌ನಡಿ ನೀಡುವುದಕ್ಕೆ ತಮ್ಮ ಅಭ್ಯಂತರ ಇದೆ ಎಂದರು. ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ, ಸದಸ್ಯರಾದ ಕೆ. ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್, ಆರ್. ಶಿವಾನಂದ್ ಇತರರು ಇದ್ದರು.