ದಾವಣಗೆರೆ: ಶ್ರಮಜೀವಿ ಕಟ್ಟಡ ಕಾರ್ಮಿಕರಿಂದ ದೃಢೀಕರಿಸಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇಟ್ಟಿರುವ ಕೋಟ್ಯಂತರ ರೂ. ಕಬಳಿಸಲು ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಭ್ರಷ್ಟ ಅಧಿಕಾರಿಗಳು ಮುಂದಾಗಿದ್ದಾರೆ.
ಕೂಡಲೇ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಇದನ್ನು ತಡೆಯಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಉಮೇಶ್ ಆಗ್ರಹಿಸಿದರು. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಆನ್ ಲೈನ್ ಮುಖಾಂತರ ಪ್ರತಿಯೊಬ್ಬ ಕಾರ್ಮಿಕ ಕಾರ್ಡುದಾರನಿಗೆ 10 ಸಾವಿರ ರೂ. ಸಹಾಯಧನ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸದ ಸರ್ಕಾರ, ಕಾರ್ಮಿಕರಿಗೆ ಕೇವಲ ತಲಾ 3,000 ರೂ. ಸಹಾಯಧನ ಘೋಷಿಸಿದೆ.
ಈ ಮಧ್ಯೆ ಕಾರ್ಮಿಕ ಇಲಾಖೆ ಸಚಿವರು, ಕಾರ್ಮಿಕ ಮಂಡಳಿಯ ಭ್ರಷ್ಟ ಅಧಿಕಾರಿಗಳು ಕುತಂತ್ರ ನಡೆಸಿ ಆಹಾರ ಕಿಟ್ ಕೊಡುವ ನೆಪದಲ್ಲಿ ನೂರಾರು ಕೋಟಿ ರೂ. ಕಬಳಿಸುವ ಹುನ್ನಾರ ನಡೆಸಿದ್ದಾರೆ. ಇದರಲ್ಲಿ ಕಾರ್ಮಿಕ ಸಚಿವರ ಪುತ್ರನೂ ಭಾಗಿಯಾಗಿರುವ ಗುಮಾನಿ ಇದೆ ಎಂದು ಆರೋಪಿಸಿದರು. ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿಯೂ ಪ್ರತಿ ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ. ನೀಡುವುದಾಗಿ ಸರ್ಕಾರ ಘೋಷಿಸಿತ್ತು.
ಆಗ ರಾಜ್ಯದ 16ಲಕ್ಷ ಖಾತೆಗಳಿಗೆ ಮಾತ್ರ ಹಣ ಜಮಾ ಆಗಿದ್ದು, ಇನ್ನುಳಿದ 10 ಲಕ್ಷ ಜನರಿಗೆ ಸಹಾಯಧನ ಈವರೆಗೂ ಸಿಕ್ಕಿಲ್ಲ. ಸಹಾಯಧನ ಇತ್ತೀಚೆಗೆ ಆನ್ ಲೈನ್‌ನಲ್ಲಿ ನೋಂದಣಿ ಮಾಡಿಸಿರುವ ಕಾರ್ಮಿಕರ ಖಾತೆಗೆ ಜಮಾ ಆಗುತ್ತಿದೆ. ಆದರೆ 2006-07ರಲ್ಲಿ ಮ್ಯಾನ್ಯುವೆಲ್ ನೋಂದಣಿ ಮಾಡಿಸಿರುವ ಅರ್ಹ ಕಾರ್ಮಿಕರ ಖಾತೆಗೆ ಜಮಾ ಆಗುತ್ತಿಲ್ಲ. ಹೀಗಾಗಿ ಮೊದಲ ಹಂತದಲ್ಲಿ ನೋಂದಣಿ ಮಾಡಿಸಿದ್ದ ಕಟ್ಟಡ ಕಾರ್ಮಿಕರು ಪರಿಹಾರ ಸಿಗದೆ ವಂಚಿತರಾಗಿದ್ದರೆ, ಹೊಸದಾಗಿ ಆನ್ ಲೈನ್‌ನಲ್ಲಿ ನೋಂದಣಿ ಮಾಡಿಸಿರುವ ಬೋಗಸ್ ಕಾರ್ಮಿಕರಿಗೆ ಪರಿಹಾರ ಸಿಗುವಂತಾಗಿದೆ ಎಂದು ದೂರಿದರು.
ಹಿಂದಿನ ವರ್ಷ ಆಹಾರ ಕಿಟ್‌ಗಳನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ನೀಡದೆ ಶಾಸಕರಿಗೆ ಕ್ಷೇತ್ರವಾರು ಹಂಚಲಾಗಿತ್ತು. ಆಗ ಆಹಾರ ಕಿಟ್ ಗಳು ಶಾಸಕರ ಬೆಂಬಲಿಗರು, ಅವರ ಪಕ್ಷದ ಕಾರ್ಯಕರ್ತರ ಪಾಲಾಯಿತು. ಈ ವರ್ಷ ಮತ್ತೆ ಆಹಾರ ಕಿಟ್ ಕೊಡಲು ಇಲಾಖೆ ಮುಂದಾಗಿದೆ. ಕಿಟ್ ಕೊಡುವುದೇ ಆದಲ್ಲಿ ಕಾರ್ಮಿಕ ಸಂಘಟನೆ ಹಾಗೂ ಸ್ಥಳೀಯ ಮುಖಂಡರ ಸಹಯೋಗದಲ್ಲಿ ಯೋಗ್ಯರಿಗೆ ಆಹಾರ ಕಿಟ್ ವಿತರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ್ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲಿ 36 ವರ್ಗದ ಕಾರ್ಮಿಕರಿದ್ದಾರೆ. ಆದರೆ ಸರ್ಕಾರ ಬಾರ್ ಬಿಲ್ಡರ್ ಮತ್ತು ಪೇಂಟರ್ ಕಾರ್ಮಿಕರಿಗೆ ಮಾತ್ರ ಟೂಲ್ ಕಿಟ್ ವಿತರಿಸುತ್ತಿದೆ. ಈ ಟೂಲ್ ಕಿಟ್‌ನಲ್ಲಿರುವ ಸಾಮಗ್ರಿ ಮೌಲ್ಯ ಮೂರ್‍ನಾಲ್ಕು ಸಾವಿರ ರೂ. ಮಾತ್ರ. ಆದರೆ ಒಂದೊಂದು ಟೂಲ್ ಕಿಟ್‌ಗೆ 15 ಸಾವಿರ ರೂ. ಬಿಲ್ ಮಾಡಿಸಿ ಕಾರ್ಮಿಕರ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸಂಘದ ಅಧ್ಯಕ್ಷ ವಿ. ಲಕ್ಷ್ಮಣ, ಶಿವಕುಮಾರ ಶೆಟ್ಟರ್, ಮೊಹಮ್ಮದ್ ರಕ್, ಸಿದ್ದೇಶ್ ಹಾಲೇಕಲ್ಲ, ಮುರುಗೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.