ಮಲೇಬೆನ್ನೂರು: ಕೋವಿಡ್ ಮಹಾಮಾರಿಯಿಂದ ತತ್ತರಿಸಿದ ಪರಿಣಾಮ ರಾಜ್ಯ ಆರ್ಥಿಕ ಹಿಂಜರಿತ ಅನುಭವಿಸಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರದ ಜೊತೆಗೆ ನಾವೆಲ್ಲರೂ ನಿಂತು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹೇಳಿದರು.
ಮತ್ತಿ ಹಾಗೂ ಕುಕ್ಕವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಾಲೆಗಳನ್ನು ಸ್ವತ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಸ್ವಾತಂತ್ರ ಭಾರತದ ಮಹತ್ವಪೂರ್ಣ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶ ಮೂಲ ಸೌಕರ್ಯದೊಂದಿಗೆ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ ಹಾಗೂ ಉದ್ಯೋಗ ಇಲ್ಲದೆ ಪರಿತಪಿಸುವ ಜನಸಾಮಾನ್ಯರಿಗೆ ಈ ಯೋಜನೆ ಸಹಕಾರಿ.
ಹೊಲಗಳಿಗೆ ಹೋಗಲು ಅವಶ್ಯಕತೆ ಇರುವ ರಸ್ತೆಗಳ ಅಭಿವೃದ್ಧಿಪಡಿಸಲು “ನಮ್ಮ ಹೊಲ ನಮ್ಮ ರಸ್ತೆ’ ಯೋಜನೆಯಡಿ ರಸ್ತೆಗಳನ್ನು ದುರಸ್ತಿ ಮಾಡಿಸುವುದು, ಮಣ್ಣಿನ ಕೊರೆತ ತಪ್ಪಿಸಲು ಕಲ್ಲು ಕಟ್ಟಡ ನಿರ್ಮಾಣ, ಜಮೀನಿನ ಒಳಗೆ ಕಾಲುವೆಗಳ ನಿರ್ಮಾಣ, ನಿಗದಿತ ಸಮುದಾಯಕ್ಕೆ ನೂತನ ತೋಟ ಕಟ್ಟಲು, ಸೋಪಾನ ಕಟ್ಟೆ ನಿರ್ಮಾಣ ಮುಂತಾದ ಯೋಜನೆಗಳು ಜಾರಿಯಲ್ಲಿದೆ. ಪ್ರತಿಯೊಂದು ಕೆಲಸವನ್ನು ಆಯಾ ಇಲಾಖೆಗಳೇ ಮಾಡಬೇಕೆಂಬ ಧೋರಣೆ ಕೈಬಿಡಬೇಕು.
ನರೇಗಾ ಯೋಜನೆ ಇದಕ್ಕೆ ಉತ್ತಮ ನಿದರ್ಶನವಾಗಿದ್ದು ಇದರ Ó ದುಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕಳೆದ 25 ವರ್ಷಗಳಿಂದ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರು ಬೇಸಿಗೆ ಬೆಳೆಗೆ ಬೇಕಾದ ನೀರಿಗಾಗಿ ಮನೆ ಬಿಟ್ಟು ರಾತ್ರಿಯೆಲ್ಲಾ ನಿದ್ದೆಗೆಡಬೇಕಾಗಿತ್ತು.
ಅಧಿಕಾರಿಗಳ ವಿರುದ್ಧ ನಿರಂತರ ಹೋರಾಟ ಮಾಡಿ ನೀರು ಪಡೆಯಬೇಕಾಗಿತ್ತು. ಆದರೆ ಈಗಿನ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ರೈತರ ಸಮಸ್ಯೆಗೆ ಸ್ಪಂದಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸ್ಥಳೀಯ ರೈತರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಂಜುನಾಥ್, ದಿನೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣಸ್ವಾಮಿ, ಸಹಾಯಕ ಅಭಿಯಂತರ ಮಧು ಮತ್ತಿತರರು ಇದ್ದರು.