ಎಂ.ಪಿ.ಎಂ ವಿಜಯಾನಂದಸ್ವಾಮಿ
ಹೊನ್ನಾಳಿ: ಸಮೀಪದ ಗೋವಿನಕೋವಿ ಮತ್ತು ರಾಂಪುರ ಮಧ್ಯೆ ಹರಿಯುತ್ತಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಸುಮಾರು 50 ವರ್ಷಗಳಷ್ಟು ಹಳೆಯದು. ಆದರೂ ಸೇತುವೆ ನಿರ್ಮಾಣವಾಗಿಲ್ಲ. ಮೊದಲು ಹೊನ್ನಾಳಿ ತಾಲೂಕಿನಲ್ಲಿದ್ದ ತುಂಗಭದ್ರಾ ನದಿ ದಂಡೆಯ ಗೋವಿನಕೋವಿ, ಕುರುವ, ಗ್ರಾಮಗಳು ಈಗ ನ್ಯಾಮತಿ ತಾಲೂಕಿಗೆ ಸೇರಿವೆ.
ಈ ಊರುಗಳ ಸಂಪರ್ಕ ಬೇರೆ ತಾಲೂಕು ಹಾಗೂ ಜಿಲ್ಲೆಗಳ ಸಂಪರ್ಕಕ್ಕೆ ಸುಲಭವಾಗಲು ನದಿಗೆ ಸೇತುವೆ ಬೇಕು ಎಂಬ ಬೇಡಿಕೆ ಹಲವು ದಶಕಗಳಿಂದಲೂ ಇದೆ. ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಮಾಡಲು 1965 ರಲ್ಲಿ ಕೃಷಿ ಮಂತ್ರಿಗಳಾಗಿದ್ದ ಎಚ್. ಎಸ್. ರುದ್ರಪ್ಪ ಅವರ ಕಾಲದಿಂದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ತನಕ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಇನ್ನೂ ಕಾರ್ಯ ರೂಪಕ್ಕೆ ಬಾರದೇ ಇರುವುದರಿಂದ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ.
ಸೇತುವೆ ನಿರ್ಮಾಣವಾದರೆ ಅನುಕೂಲವೇನು?: ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣವಾದರೆ ನ್ಯಾಮತಿಯಿಂದ ರಾಂಪುರ ಮತ್ತು ಗೆಡ್ಡೆ ರಾಮೇಶ್ವರ ಕ್ಷೇತ್ರಕ್ಕೆ ಕೇವಲ 11 ರಿಂದ 13 ಕಿಮೀ ದೂರ ಹಾಗೂ ಸಾಸ್ವೆಹಳ್ಳಿ ಹೋಬಳಿ ಕೇಂದ್ರಕ್ಕೆ 14 ಕಿಮೀ ಅಂತರದಲ್ಲಿ ಕ್ರಮಿಸಬಹುದು. ಸೇತುವೆ ಇಲ್ಲದ ಕಾರಣ ನ್ಯಾಮತಿ ತಾಲೂಕಿನ ಅನೇಕ ಗ್ರಾಮಗಳ ಜನರು ಹೊನ್ನಾಳಿಗೆ ಬಂದು ಬೆನಕನಹಳ್ಳಿ ಗ್ರಾಮದ ಮೂಲಕ ಸುಮಾರು 30 ಕಿಮೀ ಸುತ್ತುವರೆದು ಹೋಗಬೇಕಾಗಿದೆ.
ಇದು ಕೇವಲ ನ್ಯಾಮತಿ ತಾಲೂಕಿನ ಗ್ರಾಮಗಳ ಸಮಸ್ಯೆ ಮಾತ್ರ ಅಲ್ಲ. ಶಿವಮೊಗ್ಗ, ಚಿತ್ರದುರ್ಗ, ಶಿಕಾರಿಪುರ, ಚನ್ನಗಿರಿ, ನ್ಯಾಮತಿ ಮಾರ್ಗದ ಜತೆಗೆ ಸಾಸ್ವೆಹಳ್ಳಿ, ಗೋವಿನಕೋವಿ ಹೋಬಳಿಯ ಗ್ರಾಮಗಳಿಗೂ ಅನ್ವಯಿಸುತ್ತದೆ. ಜನವರಿ ತಿಂಗಳ ಅಂತ್ಯದಿಂದ ಮೇ ತಿಂಗಳ ಅಂತ್ಯದವರಿಗೆ ನದಿ ಇಳಿದಿರುವ ಕಾರಣ ಕಾಲುಹಾದಿಯಲ್ಲಿ ನದಿ ದಾಟಿ ಹೋಗಬಹುದು.
ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ದಾಟಲು ಸಾಧ್ಯವಿಲ್ಲ. ರಾಂಪುರ, ಸಾಸ್ವೆಹಳ್ಳಿ, ಚನ್ನಗಿರಿಗೆ ಹೋಗಬೇಕಾದರೆ ಹೊನ್ನಾಳಿ ಬಳಿ ಇರುವ ತುಂಗಭದ್ರಾ ನದಿ ಸೇತುವೆ ಮೇಲೆ ಹೋಗಬೇಕು. ಇಲ್ಲವಾದರೆ ದೋಣಿ, ಹರಿಗೋಲಿನಲ್ಲಿ ಪ್ರಯಾಣ ಮಾಡಬೇಕಾಗುತ್ತದೆ.
ದ್ವೀಪದಂತಿರುವ ನಡುಗಡ್ಡೆಯಲ್ಲಿ ಗಡ್ಡೆ ರಾಮೇಶ್ವರ ದೇಗುಲ, ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರ ಮೂಲ ಗುರುಗಳ ಗದ್ದುಗೆಯ ಗವಿ ಇದೆ. ಮಳೆಗಾಲ ಬಂದರೆ ಸುಮಾರು ಆರು ತಿಂಗಳು ಕಾಲ ಸಂಪರ್ಕ ಇಲ್ಲದೇ ಬಂದ್ ಆಗುತ್ತದೆ. ವಾರಕ್ಕೊಮ್ಮೆ ಬಂದು ದೇವರ ಅರ್ಚನೆ ನಡೆಸಲಾಗುತ್ತದೆ.
ನದಿ ನೀರು ಜಾಸ್ತಿ ಆದರೆ ಬರುವುದಿಲ್ಲ. ಆದ್ದರಿಂದ ಇಲ್ಲಿಗೊಂದು ಸೇತುವೆ ಅವಶ್ಯಕತೆ ಇದೆ ಎನ್ನುತ್ತಾರೆ ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ, ರಾಂಪುರ ಮತ್ತಿತರ ಗ್ರಾಮಗಳ ಜನರು.