ಹರಿಹರ : ಕೂಲಿಕಾರರ ಕೊರತೆ ಹೋಟೆಲ್, ಅಂಗಡಿ-ಮುಂಗಟ್ಟುಗಳಿಗೆ ಮಾತ್ರವಲ್ಲ, ಕೃಷಿ ಕ್ಷೇತ್ರವನ್ನೂ ಹೈರಾಣಾಗಿಸಿದೆ. ಬೇಸಾಯವನ್ನೇ ನಂಬಿರುವ ರೈತ ಕುಟುಂಬಗಳು ಕೂಲಿಕಾರರು ಸಿಗದೆ ತಮ್ಮ ಜಮೀನಿನ ಕೆಲಸವನ್ನು ತಾವೇ ಮಾಡಿಕೊಳ್ಳಬೇಕಿದೆ.
ಮಿಕ್ಕಿದ ಜಮೀನನ್ನು ಬೀಳು ಬಿಡುವ ಅನಿವಾರ್ಯ ಪರಿಸ್ಥಿತಿಯಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರ ನೆರವಿನಿಂದಲೇ ಚೆಲ್ಲು ಭತ್ತ ಪದ್ಧತಿ ಮೂಲಕ ಮೂರೂವರೆ ಎಕರೆ ಭತ್ತ ಬಿತ್ತನೆ ಮಾಡಿ ಉತ್ತಮ ಫಸಲು ಪಡೆದ ಯಶೋಗಾಥೆಗೆ ತಾಲೂಕಿನ ಕೊಂಡಜ್ಜಿ ಗ್ರಾಮದ ರೈತ ಮಲ್ಲಿಕಾರ್ಜುನಯ್ಯ ಮುನ್ನುಡಿ ಬರೆದಿದ್ದಾರೆ. ಕೂಲಿಕಾರರ ಅಭಾವ ಮತ್ತು ದುಬಾರಿ ಕೂಲಿ ದರದಿಂದ ಭತ್ತ ಬೆಳೆಯುವುದು ಕಳೆದ ಬೇಸಿಗೆ ಹಂಗಾಮಿನಲ್ಲಿ ಮಲ್ಲಿಕಾರ್ಜುನಯ್ಯರಿಗೆ ಸವಾಲಾಗಿತ್ತು. ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಪರಿಚಿತ ರೈತರೊಂದಿಗೆ ಚರ್ಚಿಸಿ ಚೆಲ್ಲು ಭತ್ತ ಪದ್ಧತಿಯಲ್ಲಿ ಬಿತ್ತನೆ ಮಾಡಿದರು.
ಚೆಲ್ಲು ಭತ್ತ ಬಿತ್ತನೆ ಹೇಗೆ?: ತಮ್ಮ ಮೂರುವರೆ ಎಕರೆ ಗದ್ದೆಗೆ ನಾಟಿ ಹಚ್ಚಲು ಸಿದ್ದಪಡಿಸಿದಂತೆ ಎರಡು ಬಾರಿ ಕಲ್ಟಿವೇಟರ್ ಹೊಡೆಸಿದರು. ನೀರು ಬಿಟ್ಟು ಕೇಜ್ ವ್ಹೀಲ್‌ನಿಂದ ರೊಳ್ಳಿ ಹೊಡೆಸಿ ಒಂದಿಂಚು ನೀರು ನಿಲ್ಲಿಸಿದರು. ಭತ್ತದ ಬೀಜವನ್ನು ಸಸಿ ಮಡಿಗೆ ಮಾಡುವಂತೆ ನೆನೆಸಿ ಸ್ವಲ್ಪ ಕಾವು ಬರಲು ಬಿಟ್ಟು ಎಕರೆಗೆ 10 ಕೆಜಿ ಯಂತೆ ಗದ್ದೆಯಲ್ಲಿ ತೆಳುವಾಗಿ ಚೆಲ್ಲಿದ ನಂತರ ಗದ್ದೆಯಿಂದ ನೀರು ಬಸಿದು ಹೋಗುವಂತೆ ಮಾಡಲಾಯಿತು. ಭತ್ತ ಚೆಲ್ಲಿದ ನಾಲ್ಕನೇ ದಿನ ಕಳೆ ನಾಶಕಕ್ಕೆ ಸಾಥಿ (ಫೆರಗಸ್ ಸೆಲ ರೈಲ್ ಮಿಥೈಲ್) ಎಕರೆಗೆ 80 ಗ್ರಾಂನಂತೆ ಎಂಟು ಕೆಜಿ ಮರಳಿನ ಜೊತೆ ಮಿಶ್ರಣ ಮಾಡಿ ಎರಚಲಾಯಿತು.
ವಾರದ ನಂತರ ಬೀಜ ಮೊಳೆಕೆಯೊಡೆದು ಚಿಗುರತೊಡಗಿತು. ಎರಡು ವಾರದ ಹೊತ್ತಿಗೆ ಭತ್ತದೊಂದಿಗೆ ಕಳೆಯೂ ಕೂಡ ಚಿಗುರೊಡೆಯತೊಡಗಿತ್ತು. ಬಿಸ್ ಬೈರಿ ಬ್ಯಾಕ್ ಸೋಡಿಯಂ ಎಂಬ ಕಳೆ ನಾಶಕವನ್ನು ಒಂದು ಮಿಲಿಯಷ್ಟು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಿ ಕಳೆ ನಾಶ ಮಾಡಿದರು.
40 ದಿವಸದ ಬೆಳೆ ಇದ್ದಾಗ ಮತ್ತೂಮ್ಮೆ ಕಳೆ ನಾಶಕ ಸಿಂಪರಿಸಿದರು. ರಸಗೊಬ್ಬರ ಬಳಕೆ: ಬೀಜ ಚೆಲ್ಲುವಾಗ ಎಕರೆಗೆ 100 ಕೆಜಿ 20:20:0:13, ನಂತರ 25 ದಿನದ ಬೆಳೆಗೆ ಎಕರೆಗೆ 50 ಕೆಜಿ 10:26:20, 20 ಕೆಜಿ ಯೂರಿಯಾ ಮತ್ತು 20 ಕೆಜಿ ಪೊಟ್ಯಾಷ್ ಒಂದನೇ ಮೇಲು ಗೊಬ್ಬರವಾಗಿ ನೀಡಿದರು. 45 ದಿನಗಳ ಬೆಳೆ ಇದ್ದಾಗ 50 ಕೆಜಿ 20:20:0:13 ಎರಡನೇ ಮೇಲುಗೊಬ್ಬರ ನೀಡಿದರು.
ಅತ್ಯಂತ ಕಡಿಮೆ ಮಾನವ ಶಕ್ತಿ, ರಸಗೊಬ್ಬರ ಬಳಸಿ ಸಾಮಾನ್ಯ ನಾಟಿಯಷ್ಟೆ ಎಕರೆಗೆ ಸುಮಾರು 35 ಕ್ವಿಂಟಲ್ ಇಳುವರಿ ಪಡೆದಿರುವ ಮಲ್ಲಿಕಾರ್ಜುನಯ್ಯರ ಯಶಸ್ಸು ಸುತ್ತಲಿನ ರೈತರನ್ನು ಆಕರ್ಷಿಸಿದೆ. ಈಗಾಗಲೆ ಸುತ್ತಲಿನ ಹತ್ತಾರು ರೈತರು ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಚೆಲ್ಲು ಭತ್ತ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕೃಷಿ ಇಲಾಖೆ ಅಧಿ ಕಾರಿಗಳು ತಿಳಿಸಿದ್ದಾರೆ.