ದಾವಣಗೆರೆ: ಐತಿಹಾಸಿಕ ಪ್ರಸಿದ್ಧ, ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಖ್ಯಾತಿಯ ಚನ್ನಗಿರಿ ತಾಲೂಕಿನ ಸೂಳೆಕೆರೆ(ಶಾಂತಿಸಾಗರ) ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿ ವೇಳೆ ಭಾರೀ ಪ್ರಮಾಣದ ಸ್ಫೋಟಕ ಬಳಕೆ ಮಾಡಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಲ್ಪೆ-ಮೊಳಕಾಲ್ಮೂರು ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಸೂಳೆಕೆರೆಯ ಸಿದ್ದನನಾಲಾ ಬಳಿ ರಸ್ತೆ ಅಗಲೀಕರಣಕ್ಕಾಗಿ ಕೆರೆಯ ಒಂದು ಭಾಗದಲ್ಲಿರುವ ಗುಡ್ಡವನ್ನು ಭಾರೀ ಪ್ರಮಾಣದ ಸ್ಫೋಟಕ ಬಳಸಿ ಕೆಡವಲಾಗಿದೆ. ಸ್ಥಳೀಯರ ಪ್ರಕಾರ ಕಳೆದ 10 ದಿನಗಳ ಹಿಂದಿನಿಂದಲೂ ಬ್ಲಾಸ್ಟ್ ಮಾಡಲಾಗುತ್ತಿದ್ದು, ಈಗ ನಿಲ್ಲಿಸಲಾಗಿದೆ.
ಭಾರೀ ಪ್ರಮಾಣದ ಸ್ಫೋಟಕ ಬಳಸಿ, ಗುಡ್ಡ ಕೆಡವುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕಾಮಗಾರಿ ವೇಳೆ ಸ್ಫೋಟಕ ಬಳಕೆ ಮಾಡುತ್ತಿರುವ ವಿಷಯ ಗೊತ್ತಾದ ನಂತರ ಖಡ್ಗ ಹೋರಾಟ ಸಮಿತಿ ಪದಾಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಸ್ಫೋಟಕ ಬಳಕೆ ನಿಲ್ಲಿಸಲಾಗಿದೆ. ಐತಿಹಾಸಿಕ ಪ್ರಸಿದ್ಧ ಸೂಳೆಕೆರೆ ಬಳಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಸ್ಫೋಟಕ ಬಳಕೆಗೆ ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಸ್ಫೋಟ ನಡೆಸಿರುವ ಸ್ಥಳ ಅರಣ್ಯ ಇಲಾಖಾ ವ್ಯಾಪ್ತಿಗೆ ಬರಲಿದೆ.
ಅರಣ್ಯ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ ಎಂಬುದು ತಿಳಿದು ಬಂದಿದೆ. ನಮ್ಮ ಸಂಘಟನೆಯ ವಿರೋಧದ ನಂತರ ಸ್ಫೋಟಕ ಬಳಕೆ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಖಡ್ಗ ಹೋರಾಟ ಸಮಿತಿಯ ಎಚ್.ಆರ್. ರಘು ತಿಳಿಸಿದರು. ರಸ್ತೆ ಅಗಲೀಕರಣಕ್ಕಾಗಿ ಸ್ಫೋಟಕ ಬಳಿಸಿ ಗುಡ್ಡವನ್ನು ಕೆಡವಿದ್ದರಿಂದ ಮುಂದಿನ ದಿನಗಳಲ್ಲಿ ಭಾರೀ ತೊಂದರೆ ಆಗಲಿದೆ. 45 ಡಿಗ್ರಿಯ ಬದಲಿಗೆ 90 ಡಿಗ್ರಿಯಂತೆ ಗುಡ್ಡವನ್ನು ಕೆಡವಲಾಗಿದೆ. ಮಳೆಯಿಂದ ಗುಡ್ಡದ ಮಣ್ಣು ಕೆರೆ ಸೇರಲಿದೆ. ಈಗಾಗಲೇ ಸೂಳೆಕೆರೆಯಲ್ಲಿ ಸಾಕಷ್ಟು ಹೂಳಿದೆ. ಅದರ ಜತೆಗೆ ಗುಡ್ಡದ ಮಣ್ಣು ಸೇರಿಕೊಂಡರೆ ಬಹಳಷ್ಟು ಸಮಸ್ಯೆ ಆಗಲಿದೆ ಎಂದು ರಘು ಆತಂಕ ವ್ಯಕ್ತಪಡಿಸುತ್ತಾರೆ.
ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೆ ಸ್ಫೋಟಕ ಬಳಸಿದವರು, ಜಿಲ್ಲಾ, ತಾಲೂಕು ಆಡಳಿತದ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ಸ್ಫೋಟ ಮಾಡಿದವರು ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕಾಗಿದೆ. ಹಾಗಾಗಿ ನಮ್ಮ ಸಂಘದಿಂದ ಸಂಬಂಧಿತ ಎಲ್ಲರ ವಿರುದ್ಧವೂ ದೂರು ಸಲ್ಲಿಸಲಾಗುವುದು ಎಂದು ರಘು ತಿಳಿಸಿದರು.