Advertisement

ಸವಾಲಾಗಲಿದೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ!

10:02 PM Jun 17, 2021 | Team Udayavani |

„ರಾ. ರವಿಬಾಬು

Advertisement

ದಾವಣಗೆರೆ: ರಾಜ್ಯ ಸರ್ಕಾರ ಜುಲೈ ತಿಂಗಳ ಮೂರನೇ ವಾರದಲ್ಲಿ ಸರಳೀಕೃತ, ಬಹು ಆಯ್ಕೆ ಮಾದರಿಯಲ್ಲಿ ನಡೆಸುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜಾಗುವುದು ಸವಾಲಿನಂತಾಗಿದೆ! ಹೌದು, ಏಕಾಏಕಿ ಸರಳೀಕೃತ, ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಬೇಕಾದ ಅನೇಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾದರಿಯೇ ಹೊಸದಾಗಿದೆ. ಸರ್ಕಾರವೇನೋ ಈ ಬಾರಿಯ ಪರೀಕ್ಷೆ ಸರಳೀಕೃತವಾಗಿರುತ್ತದೆ ಎಂದು ಹೇಳುತ್ತಿದೆ.

ಆದರೆ ವಿದ್ಯಾರ್ಥಿ ಸಮುದಾಯಕ್ಕೆ ಹೊಸ ಮಾದರಿಯಲ್ಲಿ ನಡೆಯುವ ಪರೀಕ್ಷೆ ಅಷ್ಟು ಸುಲಭ ಅಲ್ಲ. ಕೊರೊನಾ ಹಾವಳಿಯ ಪರಿಣಾಮ ತಿಂಗಳುಗಟ್ಟಲೆ ಶಾಲೆಗಳು ನಡೆದಿಲ್ಲ. ಹಾಗಾಗಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸೂಕ್ತ ಸಮಯಾವಕಾಶ ದೊರೆತಿಲ್ಲ. ಈಗ ದಿಢೀರನೇ ಹೊಸ ಮಾದರಿಯಲ್ಲಿ ಪರೀಕ್ಷೆ ಎದುರಿಸಲೇಬೇಕಾದ ಅನಿವಾರ್ಯತೆ ವಿದ್ಯಾರ್ಥಿ ಸಮುದಾಯದ ಮುಂದಿದೆ.

ಯಾವುದೇ ವಿದ್ಯಾರ್ಥಿಯನ್ನ ನಪಾಸು ಮಾಡುವ ಪ್ರಶ್ನೆಯೇ ಇಲ್ಲ, ಎರಡು ದಿನಗಳ ಕಾಲ ಮೂರು ವಿಷಯ ಸೇರಿಸಿ ಒಂದೇ ಪ್ರಶ್ನೆಪತ್ರಿಕೆ ಸರಳೀಕೃತವಾಗಿರುತ್ತದೆ ಅಲ್ಲದೆ ಬಹು ಆಯ್ಕೆ ಪ್ರಶ್ನೆಗಳೇ ಇರಲಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವಿದ್ಯಾರ್ಥಿಗಳ ಪಾಲಿಗೆ ಅಷ್ಟೊಂದು ಸರಳವಾಗಿ ಇರುವುದಿಲ್ಲ ಎಂದೇ ಕೆಲ ಶಿಕ್ಷಕರು ಹೇಳುತ್ತಾರೆ. ಗಣಿತ ವಿಷಯದಲ್ಲಿ ಬಹುಆಯ್ಕೆ ಪ್ರಶ್ನೆಗಳಲ್ಲಿ 10-15 ರಿಂದ ಪ್ರಶ್ನೆಗಳಿಗೆ ಮಾತ್ರ ನೇರವಾಗಿ ಉತ್ತರಿಸಬಹುದು. ಇನ್ನುಳಿದ ಪ್ರಶ್ನೆಗಳಿಗೆ ಲೆಕ್ಕ ಮಾಡಿದರೆ ಮಾತ್ರವೇ ಉತ್ತರ ಸಿಗುತ್ತದೆ. ಕೆಲವು ಲೆಕ್ಕ ಮಾಡಲು ಶಿಕ್ಷಕರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ.

ಹಾಗಿರುವಾಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ದೊರೆಯುವಂತಹ ಸಮಯದಲ್ಲಿ ಲೆಕ್ಕ ಮಾಡಿ, ನಿಖರ ಉತ್ತರ ನೀಡುವುದು ಕಷ್ಟ ಆಗುತ್ತದೆ. ವಿದ್ಯಾರ್ಥಿಗಳು ಗಣಿತ ಒಂದೇ ಅಲ್ಲ. ಇತರೆ ವಿಷಯಗಳ ಪರೀಕ್ಷೆ ಬರೆಯಬೇಕಾಗುವುದರಿಂದ ಇನ್ನೂ ಸವಾಲು ಆಗಲಿದೆ ಎನ್ನುತ್ತಾರೆ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು. ಪ್ರತಿ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳೊಂದಿಗೆ ಓಎಂಆರ್‌ ಶೀಟ್‌ ನೀಡಲಾಗುತ್ತದೆ. ಎನ್‌ಎಂಎಸ್‌ ಎಸ್‌ ಮತ್ತು ಎನ್‌ಟಿಎಸ್‌ಇ ಪರೀಕ್ಷೆ ತೆಗೆದುಕೊಂಡಿರುವಂತಹವರಿಗೆ ಮಾತ್ರವೇ ಓಎಂಆರ್‌ ಶೀಟ್‌ನ ಪರಿಚಯ ಇರುತ್ತದೆ. ಅವರನ್ನು ಹೊರತುಪಡಿಸಿದರೆ ಇತರರಿಗೆ ಓಎಂಆರ್‌ ಶೀಟ್‌ನ ಪರಿಚಯ ಬಹಳ ಕಡಿಮೆ. ಅಂತಹ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎನ್ನುತ್ತಾರೆ ಅವರು.

Advertisement

ಪ್ರತಿ ವಿದ್ಯಾರ್ಥಿ ಬರೆದಂತಹ ಉತ್ತರವನ್ನು ಶೇಡ್‌ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಶೇಡ್‌ ಮಾಡಬೇಕಾಗುತ್ತದೆ. ಶೇಡ್‌ ಮಾಡುವುದಕ್ಕೆ ಬಾಲ್‌ ಪಾಯಿಂಟ್‌ ಪೆನ್‌ ಬಳಕೆ ಮಾಡುವುದು ಉತ್ತಮ. ಆದರೆ, ಬಹಳಷ್ಟು ವಿದ್ಯಾರ್ಥಿಗಳು ಜೆಲ್‌ಪೆನ್‌ ಬಳಕೆ ಮಾಡು¤ತಾರೆ. ಜೆಲ್‌ ಪೆನ್‌ ಬಳಕೆ ಮಾಡುವುದ ರಿಂದ ಶೇಡ್‌ ಮಾಡುವುದು ಕಷ್ಟವಾಗುತ್ತದೆ. ಶೇಡ್‌ ಮಾಡುವಾಗ ಸ್ವಲ್ಪ ವ್ಯತ್ಯಾಸವಾದರೂ ಉತ್ತರ ಸರಿಯಾಗಿ ಕಾಣಿಸದಂತಾಗುತ್ತದೆ. ಬಹು ಮುಖ್ಯವಾಗಿ ಅನೇಕರಿಗೆ ಶೇಡ್‌ ಮಾಡುವ ವಿಧಾನದ ಬಗ್ಗೆ ಗೊತ್ತೇ ಇಲ್ಲ. ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಗೆ ಕಾರಣವಾಗಲಿದೆ ಎಂದು ಅಭಿಪ್ರಾಯ ಪಡುತ್ತಾರೆ.

ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಸರಿಯಾಗಿ ನಡೆದಿಲ್ಲ. ಪಾಠ-ಪ್ರವಚನ ಅಷ್ಟಕಷ್ಟೇ ನಡೆದಿವೆ. ಆ ನಡುವೆಯೂ ವಿದ್ಯಾರ್ಥಿಗಳು ಹಿಂದಿನ ಸಾಲಿನ ಪರೀಕ್ಷೆಗಳಂತೆ ಸಿದ್ಧವಾಗಿದ್ದಾರೆ. ಈಗ ಏಕಾಏಕಿ ಹೊಸ ಮಾದರಿಯ ಪರೀಕ್ಷಾ ವಿಧಾನಕ್ಕೆ ಸಿದ್ಧರಾಗಬೇಕಾಗಿರುವುದು ತುಂಬಾ ತೊಡಕಾಗಲಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹು ಆಯ್ಕೆ, ಸರಳೀಕೃತ ಮಾದರಿ ಪರೀಕ್ಷಾ ವಿಧಾನ ಕಗ್ಗಂಟು ಆಗುವ ಎಲ್ಲ ಸಾಧ್ಯತೆಯೂ ಇದೆ ಎನ್ನುತ್ತಾರೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಂತಹ ವಿದ್ಯಾರ್ಥಿಗಳನ್ನು ಫೇಲ್‌ ಮಾಡುವುದಿಲ್ಲ ಎಂದು ಸರ್ಕಾರ ಹೇಳಿರುವುದರಿಂದ ಕೆಲವಾರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೇಗಿದ್ದರೂ ಪಾಸ್‌ ಆಗುತ್ತೇವೆ ಎಂಬ ಭಾವನೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ ಕೆಲವು ವಿದ್ಯಾರ್ಥಿಗಳು ಓದುವುದನ್ನೇ ಕೈ ಬಿಟ್ಟಿರುವುದು ಕಾಣುತ್ತಿದ್ದೇವೆ ಎನ್ನುತ್ತಾರೆ ಹಲವು ಶಿಕ್ಷಕರು. ಈ ಎಲ್ಲ ಕಾರಣಗಳಿಂದ ಈ ಬಾರಿಯ ಹೊಸ ಮಾದರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಸಮುದಾಯಕ್ಕೆ ಸವಾಲಿನಂತಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next