ದಾವಣಗೆರೆ: ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಪಾದಯಾತ್ರೆ ಕೈಗೊಂಡಿರುವುದಾಗಿ ಜ್ಞಾನಭಿಕ್ಷಾ ಪಾದಯಾತ್ರೆ ರೂವಾರಿ ಎಚ್.ಕೆ. ವಿವೇಕಾನಂದ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷದಲ್ಲಿ ಎಲ್ಲ ಕ್ಷೇತ್ರದಲ್ಲಿ ಮಾನವೀಯ ಮೌಲ್ಯಗಳು ಕುಸಿದಿವೆ. ವಿನಾಶದ ಅಂಚಿಗೆ ಬಂದು ನಿಂತಿರುವ ಪರಿಣಾಮ ಇನ್ನು ಕೆಲವೇ ವರ್ಷಗಳಲ್ಲಿ ಅತ್ಯಂತ ಕೆಟ್ಟ ಹಂತಕ್ಕೆ ತಲುಪಲಿದ್ದೇವೆ. ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಿ ಪುನರುತ್ಥಾನಕ್ಕಾಗಿ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.
2020ರ ನ. 1 ರಿಂದ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರ್ಪಳ್ಳಿ ಗ್ರಾಮದಿಂದ ಪಾದಯಾತ್ರೆ ಪ್ರಾರಂಭಸಿದ್ದು ಈವರೆಗೆ 227 ದಿನಗಳಲ್ಲಿ 6,700 ಕಿಲೋಮೀಟರ್ ನಡೆದಿದ್ದೇನೆ. ಹೊಸ ತಾಲೂಕುಗಳು ಒಳಗೊಂಡಂತೆ ರಾಜ್ಯದ 240 ತಾಲೂಕಿಗಳಲ್ಲಿ ಸಂಚರಿಸಿ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸುವ ಕೆಲಸ ಮಾಡಲಿದ್ದೇನೆ. ಇನ್ನೂ 12 ಸಾವಿರ ಕಿಮೀ ಕ್ರಮಿಸಬೇಕಾಗಿದೆ. 400 ದಿನಗಳು ಬೇಕಾಗಬಹುದು. ಚಾಮರಾಜನಗರ ಜಿಲ್ಲೆಯ ಕೊನೆಯ ಗ್ರಾಮದಲ್ಲಿ ಪಾದಯಾತ್ರೆ ಮುಕ್ತಾಯ ಮಾಡುತ್ತೇನೆಂದರು.
ತಮ್ಮದು ಏಕಾಂಗಿ ಪಾದಯಾತ್ರೆಯಾಗಿದ್ದು, ಯಾರೇ ಹಣ ನೀಡಿದರೂ ತೆಗೆದುಕೊಳ್ಳುವುದೇ ಇಲ್ಲ. ಬಲವಂತವಾಗಿ ನೀಡಿದರೂ ಸರಿಯೇ, ತೆಗೆದುಕೊಳ್ಳುವುದಿಲ್ಲ. ಪಾದಯಾತ್ರೆಗಾಗಿ ಮೀಸಲಿಟ್ಟಿರುವ ಹಣ ಬಳಕೆ ಮಾಡುತ್ತೇನೆ. ಎಂತದ್ದೇ ಸಂದರ್ಭದಲ್ಲೂ ವಾಹನ ಏರುವುದಿಲ್ಲ. ಆಗಾಗ ತಮ್ಮ ಪಾದಯಾತ್ರೆಯಲ್ಲಿ ಗೆಳೆಯರು, ಸಮಾನ ಮನಸ್ಕರು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.
ರಾಜಕಾರಣ, ಶಿಕ್ಷಣ, ವೈದ್ಯಕೀಯ, ಮಾಧ್ಯಮ, ಆಡಳಿತ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲಿ ಮೌಲ್ಯಗಳು ಕಾಣೆಯಾಗುತ್ತಿದೆ. ಮೌಲ್ಯಗಳ ಜಾಗದಲ್ಲಿ ಹಣ ಪ್ರಧಾನ ಭೂಮಿಕೆ ವಹಿಸುತ್ತಿದೆ. ಜೀವ ಉಳಿಸುವಂತಹ ವೈದ್ಯಕೀಯ ಕ್ಷೇತ್ರವೂ ವಾಣಿಜ್ಯಕರಣವಾಗುತ್ತಿದೆ. ಊರ ಹೊರಗೆ ಇರುತ್ತಿದ್ದಂತಹ ಸಾರಾಯಿ ಅಂಗಡಿ ಊರ ಮಧ್ಯೆ ಬಂದಿವೆ. ಶುಭ ಸಮಾರಂಭಗಳಲ್ಲಿ ಕಾಣುತ್ತಿದ್ದ ವಿದ್ಯುತ್ ದೀಪಗಳ ಅಲಂಕಾರ ಬಾರ್‌ಗಳಲ್ಲಿ ಕಂಡು ಬರುತ್ತಿದೆ. ಮೈದಾನಗಳಲ್ಲಿ ಆಟವಾಡಬೇಕಿದ್ದ ಮಕ್ಕಳು ಮೊಬೈಲ್ ಆಟಗಳಲ್ಲಿ ಮುಳುಗಿ ಹೋಗುತ್ತಿದ್ದಾರೆ ಎಂದು ವಿಷಾದಿಸಿದ ಅವರು ಗ್ರಾಮ ಪಂಚಾಯತ್‌ಗಳಲ್ಲಿ ಗ್ರಂಥಾಲಯ ಪ್ರಾರಂಭಿಸಬೇಕು. ಮಕ್ಕಳು ಮೈದಾನದಲ್ಲಿ ಆಟೋಟ ಆಡುವಂತಾಗಬೇಕು. ಪೀತಿ, ಪ್ರೇಮ, ತಾಳ್ಮೆ, ಸಂಯಮ, ಭಾತೃತ್ವ, ತ್ಯಾಗದಂತ ಮಾನವೀಯ ಮೌಲ್ಯಗಳು ಪುನರುತ್ಥಾನವಾಗಬೇಕು ಎಂದು ಆಶಿಸಿದರು.
ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಎಚ್.ಕೆ. ವಿವೇಕಾನಂದರು ಉತ್ತಮ ಮತ್ತು ಒಳ್ಳೆಯ ಕಾರ್ಯಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಮಾನವೀಯ ಮೌಲ್ಯಗಳು ಉಳಿಯಲೇ ಬೇಕು. ದಾರ್ಶನಿಕರ ಮೌಲ್ಯಗಳಿಂದ ಮಾತ್ರ ಸಮಾಜ ಉಳಿಸಲು ಸಾಧ್ಯ. ಮೌಲ್ಯಗಳ ನೈಜ ಆರಾಧಕರಾಗಿ ವಿವೇಕಾನಂದ ಕೆಲಸ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಡಾ| ವಿ.ಎಚ್. ಹನುಮಂತಪ್ಪ, ಸುರೇಂದ್ರ, ಎಸ್.ಎಸ್. ಸಿದ್ದರಾಜು, ಶಿವಕುಮಾರ್‌ಸ್ವಾಮಿ ಆರ್. ಕುರ್ಕಿ ಸುದ್ದಿಗೋಷ್ಠಿಯಲ್ಲಿದ್ದರು.