ದಾವಣಗೆರೆ: ಮಹಾಮಾರಿ ಕೊರೊನಾ ದಿಂದ ಮುಕ್ತರಾಗಲು ಪ್ರತಿಯೊಬ್ಬರು ಸ್ವಯಂ ಜಾಗೃತಿ ಹೊಂದಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ಲೋಕ ಕಲ್ಯಾಣಾರ್ಥ ಮತ್ತು ಕೊರೊನಾ ಸೋಂಕು ನಿವಾರಣೆಗೆ ಪ್ರಾರ್ಥಿಸಿ ಸೋಮವಾರ ಶ್ರೀಮದ್ ವೀರಶೈವ ಸದೊಧನಾ ಸಂಸ್ಥೆ ಜಿಲ್ಲಾ ಘಟಕದಿಂದ ದೇವರಾಜ ಅರಸು ಬಡಾವಣೆಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಮೃತ್ಯುಂಜಯ, ಪ್ರತ್ಯಂಗಿರಾ ಹೋಮ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಯಾರೂ ಸಹ ಮೈಮರೆಯಬಾದರು.
ಯಾವುದೇ ಕಾರಣಕ್ಕೂ ಆಲಸ್ಯ, ನಿರ್ಲಕ್ಷé ಮಾಡಬಾರದು. ಪ್ರತಿಯೊಬ್ಬರು ಸ್ವಯಂ ಜಾಗೃತಿಯಿಂದ ಇರಬೇಕು. ತೀರಾ ಅನಿವಾರ್ಯ ಕೆಲಸ ಇದ್ದಾಗ ಮಾತ್ರ ಮನೆಯಿಂದ ಹೊರ ಬರಬೇಕು. ಸದಾ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈಗಳ ಸ್ವತ್ಛತೆ ಮತ್ತು ವೈಯಕ್ತಿಕ ಸ್ವತ್ಛತೆಗೆ ಹೆಚ್ಚಿನ ಪ್ರಾಧ್ಯಾನತೆ ನೀಡಬೇಕು ಎಂದರು.
ಈಗಲೂ ಕೊರೊನಾ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿಯೇ ಕಾಣುತ್ತಿದೆ. ನಿಸರ್ಗದಲ್ಲಿ ದೊರೆಯುವಂತಹ ವನಸ್ಪತಿಗಳನ್ನು ಹೋಮ-ಹವನಾದಿಗಳಲ್ಲಿ ಆಹುತಿ ನೀಡುವುದರಿಂದ ಪರಿಸರ ಸ್ವತ್ಛವಾಗುತ್ತದೆ ಎಂದರು. ಎರಡನೇ ಅಲೆಯ ನಂತರ ಮೂರನೇ ಅಲೆ ಬರಲಿದೆ, ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಒಂದಲ್ಲ ಹತ್ತಾರು ಅಲೆಗಳು ಬಂದರೂ ಸ್ವಯಂ ಜಾಗೃತಿಯ ಮೂಲಕ ಎಲ್ಲವನ್ನೂ ಸಮರ್ಥವಾಗಿ ಎದುರಿಸಬೇಕು. ಕೊರೊನಾ ಮುಕ್ತ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ನಿಸರ್ಗದತ್ತವಾಗಿ ದೊರೆಯುವಂತಹ ವನಸ್ಪತಿಗಳನ್ನು ಹೋಮದಲ್ಲಿ ಸುಡುವುದರಿಂದ ಪರಿಸರದಲ್ಲಿನ ಗಾಳಿ ಶುದ್ಧ ವಾಗುತ್ತದೆ. ಹಾಗಾಗಿಯೇ ಮಠ-ಮಂದಿರ, ದೇವಸ್ಥಾನಗಳಲ್ಲಿ ಹೋಮ- ಹವನಾದಿಗಳನ್ನು ನೆರವೇರಿ ಸಲಾಗುತ್ತದೆ. ಆರೋಗ್ಯಕರ ಪರಿಸರ ನಿರ್ಮಾಣವಾಗಲಿ ಎಂದು ಆಶಿಸಿದರು.
ವೀರಶೈವ ಸದ್ಯೋಧನಾ ಸಂಸ್ಥೆ ಅಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿ, ಕೊರೊನಾ ಮಹಾಮಾರಿಗೆ ತುತ್ತಾಗಿರುವ ಜನರು ಮೃತ್ಯುಂಜಯನ ಕೃಪೆಯಿಂದ ಆರೋಗ್ಯವಂತರಾಗಿ ಸಹಜ ಸ್ಥಿತಿಗೆ ಮರಳಲಿ ಹಾಗೂ ವಿಶ್ವದ ಶಾಂತಿಗಾಗಿ ಹೋಮ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ, ಸದಸ್ಯರಾದ ಶಾಂತಕುಮಾರ್ ಸೋಗಿ, ಗಾಯತ್ರಿಬಾಯಿ, ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಮಾಗಿ ಜಯಪ್ರಕಾಶ್, ಶ್ರೀಕಾಂತ್ ನೀಲಗುಂದ, ಪಿ. ಅಭಿಷೇಕ್, ಗುರುಶಾಂತ ವಿ. ಸೋಗಿ, ಗಿರೀಶ್ ದೇವರಮನೆ, ಮಂಜುಳಾ ಮಹೇಶ್, ಪುಷ್ಪಾ ವಾಲಿ, ಶಿವಾನಂದ ಬೆನ್ನೂರು, ಮುತ್ತಣ್ಣ, ಯೋಗೀಶ್ ಇತರರು ಇದ್ದರು.