ದಾವಣಗೆರೆ: ಕೆನರಾ ಬ್ಯಾಂಕ್ ದೇಶಕ್ಕಾಗಿ ಹಣಕಾಸು ಸೇವೆ, ಸಾಮಾಜಿಕ ಬಾಧ್ಯತೆ, ಇತರೆ ಶ್ಲಾಘನೀಯ ಸೇವಾ ಕಾರ್ಯಗಳ ಮೂಲಕ ಇತರೆ ಹಣಕಾಸು ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮೇಯರ್ ಎಸ್.ಟಿ. ವೀರೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆನರಾ ಬ್ಯಾಂಕ್‌ನಿಂದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಕೊರೊನಾ ಸಂತ್ರಸ್ತರು, ವಾರಿಯರ್ಸ್, ಪರಿಚಾರಕರಿಗೆ ಉಚಿತ ಆಹಾರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಸಂಕಷ್ಟ ಕಾಲದಲ್ಲಿ ಅನೇಕ ಸಂಘ, ಸಂಸ್ಥೆಗಳು ಸೇವಾ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಹಲವಾರು ಕಾರ್ಯಕ್ರಮ ನಡೆಸುತ್ತಿರುವುದು ಅಭಿನಂದನಾರ್ಹ ಎಂದರು.
ಕೆನರಾ ಬ್ಯಾಂಕ್‌ನಂತಹ ಹಣಕಾಸು ಸಂಸ್ಥೆ, ಸಂಘಗಳು ವಿವಿಧ ಕಾರ್ಯಕ್ರಮಗಳ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುತ್ತಿರುವುದರಿಂದ ಸರ್ಕಾರದ ಕೆಲಸ ಸ್ವಲ್ಪ ಸುಲಭವಾಗಿದೆ. ಬ್ಯಾಂಕ್ ಉದ್ಯೋಗಿಗಳು ಸಹ ಕೊರೊನಾ ಅಪಾಯದ ಸಂದರ್ಭದಲ್ಲಿಯೂ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ ಎಂದರು.
ಕೆನರಾ ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯದ ವಿಭಾಗೀಯ ಪ್ರಬಂಧಕಿ ಜಿ.ಆರ್. ನಾಗರತ್ನ ಮಾತನಾಡಿ, ಕೆನರಾ ಬ್ಯಾಂಕ್ ತನ್ನ ಸಾಮಾಜಿಕ ಬಾಧ್ಯತೆಯ ಭಾಗವಾಗಿ ಕೊರೊನಾ ಜಾಗೃತಿ ಅಭಿಯಾನ, ಉಚಿತವಾಗಿ ಆಹಾರ, ಮಾಸ್ಕ್, ಸಾನಿಟೈಸರ್ ವಿತರಣೆ ಮಾಡುತ್ತಿದೆ. ಜಿಲ್ಲಾ ಆಸ್ಪತ್ರೆಗೆ ಅಗತ್ಯ ಸಲಕರಣೆಗಳನ್ನೂ ಕೊಡುಗೆಯಾಗಿ ನೀಡಿದೆ. ಕೊರೊನಾ ಸಂತ್ರಸ್ತರಿಗೆ ಮತ್ತು ಆಸ್ಪತ್ರೆಗಳಿಗೆ ಹಲವಾರು ಸಾಲ ಯೋಜನೆಗಳನ್ನೂ ಜಾರಿಗೆ ತಂದಿದೆ ಎಂದು ತಿಳಿಸಿದರು.
ಪಾಲಿಕೆ ನಾಮನಿರ್ದೇಶಿತ ಸದಸ್ಯ ಶಿವನಗೌಡ ಟಿ. ಪಾಟೀಲ್, ಕೆ. ರಾಘವೇಂದ್ರ ನಾಯರಿ, ಕೆನರಾ ಬ್ಯಾಂಕ್ ಹಿರಿಯ ಅ ಧಿಕಾರಿಗಳಾದ ಎಸ್.ವಿ. ರಾಮಕೃಷ್ಣ ನಾಯ್ಕ, ಬಿ.ಎ. ಸುರೇಶ್, ಹಂಪಣ್ಣ, ಕೆ. ಶಶಿಕುಮಾರ್, ಕೆ. ವಿಶ್ವನಾಥ ಬಿಲ್ಲವ, ಆರ್. ಆಂಜನೇಯ, ಸಿ.ಪರಶುರಾಮ್ ಇತರರು ಇದ್ದರು.