ಹರಿಹರ: ಪ್ರೊ| ಬಿ. ಕೃಷ್ಣಪ್ಪ ಅವರು ಸಮಾಜದಲ್ಲಿ ಬೆಳಗಿಸಿದ ಸಮಾನತೆಯ ದೀಪ ನಮಗೆಲ್ಲಾ ಆದರ್ಶವಾಗಬೇಕು ಎಂದು ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಪೊ| ಬಿ. ಕೃಷ್ಣಪ್ಪ ಅವರ 83ನೇ ಜಯಂತಿ ನಿಮಿತ್ತ ಗುರುವಾರ ನಗರದ ಹೊರವಲಯದ ಮೈತ್ರಿವನದಲ್ಲಿ ಪ್ರೊ| ಬಿ. ಕೃಷ್ಣಪ್ಪರವರ ಸಮಾಧಿ ಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದರು.
ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಮಾಡಿದ ಹೋರಾಟವನ್ನು ನಾಡಿನ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು. ಶಾಸಕ ಎಸ್. ರಾಮಪ್ಪ ಮಾತನಾಡಿ, ಇಡೀ ರಾಜ್ಯದಲ್ಲಿ ದಲಿತರಲ್ಲಿ ಜಾಗೃತಿಯ ದೀಪ ಹಚ್ಚಿದ ಪ್ರೊ| ಬಿ. ಕೃಷ್ಣಪ್ಪ ಹರಿಹರದವರಾಗಿರುವುದು ನಮ್ಮ ಭಾಗ್ಯ. ಇವರು ಕರ್ನಾಟಕದ ಡಾ| ಅಂಬೇಡ್ಕರ್ ಆಗಿದ್ದರು. ಇವರ ಚಿಂತನೆಗಳನ್ನು ನಾವು ಪಾಲಿಸಬೇಕೆಂದರು.
ದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಮಾತನಾಡಿ, ದಲಿತರ ಹಕ್ಕುಗಳ ರಕ್ಷಣೆಯ ಜೊತೆಗೆ ಧರ್ಮದ ಹೆಸರಿನಲ್ಲಿ ಮಹಿಳೆಯರ ಶೋಷಣೆ ನಡೆಯುತ್ತಿರುವುದನ್ನು ತಡೆದ ಶ್ರೇಯಸ್ಸು ಪ್ರೊ| ಬಿ.ಕೆ. ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಪೊ| ಬಿ. ಕೃಷ್ಣಪ್ಪ ಅವರ ಹುಟ್ಟೂರು ಹರಿಹರದಲ್ಲಿ ಅವರ ಸಮಾಧಿ ಇರುವೆಡೆ ಮೈತ್ರಿವನ ಸ್ಥಾಪಿಸಿರುವ ಸರಕಾರದ ಕ್ರಮ ಸ್ವಾಗತಾರ್ಹ.
ಇವರ ಹೆಸರಿನಲ್ಲಿ ದಾವಣಗೆರೆ ವಿವಿಯಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಲು ಕೋರಿಕೆ ಸಲ್ಲಿಸಿದ್ದು, ಅದನ್ನು ಆದಷ್ಟು ಬೇಗ ಜಾರಿ ಮಾಡಬೇಕೆಂದು ಆಗ್ರಹಿಸಿದರು. 70ರ ದಶಕದ ಸಾಮಾಜಿಕ ವ್ಯವಸ್ಥೆಯಲ್ಲಿ ದಮನಿತರ ಮೇಲಿನ ದೌìಜನ್ಯಗಳ ವಿರುದ್ಧ ಧ್ವನಿ ಎತ್ತಿದರು. ಅಸಹಾಯಕ, ಶೋಷಿತ ಜನರ ಪರವಾಗಿ ಭೂ ಹೋರಾಟ ರೂಪಿಸಿದರು.
ಮಲ ಹೊರುವ ಪದ್ಧತಿ ವಿರುದ್ಧ ಆಡಳಿತಗಾರರ ಗಮನ ಸೆಳೆದರು. ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಮಹಿಳೆಯರ ಶೋಷಣೆ ನಿಲ್ಲಿಸಿದರು ಎಂದು ಸ್ಮರಿಸಿದರು. ದಾವಣಗೆರೆಯ ನ್ಯಾಯವಾದಿ ಇಮ್ರಾನ್ ಖಲೀಲ್ ಉಲ್ಲಾ ಕೆ., ಗ್ರಾಪಂ ಸದಸ್ಯರಾದ ಹರಳಹಳ್ಳಿ ಎಚ್.ಎಂ. ಹನುಮಂತಪ್ಪ, ಗುಳದಹಳ್ಳ ಎ.ಕೆ.ಮಂಜಪ್ಪ, ದಾವಣಗೆರೆ ತಾಲೂಕು ದಸಂಸ ಸಂಚಾಲಕ ಪರಮೇಶ್ ಪುರದಾಳ, ಡಾ| ಜಗನ್ನಾಥ್, ನಗರ ಸಂಚಾಲಕ ಪ್ರದೀಪ್, ಹಾಲೇಶ ಕುಂದವಾಡ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಮಹಾಂತೇಶ್, ಯುವರಾಜ್, ಪರಶುರಾಮ ಹೊಸಪಾಳ್ಯ, ಹನುಮಂತ ಬೇತೂರು, ಅಣ್ಣಪ್ಪ, ಹಾಲೇಶ್ ಕುಣಿಬೆಳೆಕೆರೆ, ಹನುಮಂತ, ಸಂಜಯ್, ಸುಹಾಸ್, ಡಿ.ಎಂ. ಮಂಜುನಾಥ್, ಕರಿಬಸಪ್ಪ ಇತರರರು ಇದ್ದರು.