ಎಚ್.ಕೆ. ನಟರಾಜ
ದಾವಣಗೆರೆ: ಆರೋಗ್ಯ, ಕೊರೊನಾ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳಿಗೆ ಹಂತ ಹಂತವಾಗಿ ಆದ್ಯತೆ ಮೇರೆಗೆ ಕೋವಿಡ್ ಲಸಿಕಾಕರಣ ಶುರು ಮಾಡಿರುವ ರಾಜ್ಯ ಸರ್ಕಾರ, ಈಗ ಅವರ ಅವಲಂಬಿತ ಕುಟುಂಬ ಸದಸ್ಯರಿಗೂ ಲಸಿಕೆ ನೀಡಲು ಮುಂದಾಗಿದೆ. ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದ ಸರ್ಕಾರ, ಈಗ ಆರೋಗ್ಯ ಕಾರ್ಯಕರ್ತರ ಅವಲಂಬಿತ ಕುಟುಂಬ ಸದಸ್ಯರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡುತ್ತಿದೆ.
ಈ ಕುರಿತು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಜೂ.8ರಂದು ರಾಜ್ಯದ ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ. ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆ ಸಲ್ಲಿಸುವವರು, ಆರೋಗ್ಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಇತರೆ ನೌಕರರ ಕುಟುಂಬದ ಸದಸ್ಯರಿಗೆ ದುರ್ಬಲ ಹಾಗೂ ಕೊರೊನಾ ಮುಂಚೂಣಿ ಕಾರ್ಯಕರ್ತರ ಗುಂಪಿನಡಿ ರಾಜ್ಯ ಸರ್ಕಾರ ಸರಬರಾಜು ಮಾಡಿದ ಲಸಿಕೆ ನೀಡಬೇಕು.
ಆರೋಗ್ಯ ಕಾರ್ಯಕರ್ತರ ಕುಟುಂಬದವರೆಂದರೆ ಒಂದೇ ಸೂರಿನಡಿ ವಾಸಿಸುವ ಗಂಡ, ಹೆಂಡತಿ, ಅತ್ತೆ, ಮಾವ, ತಂದೆ, ತಾಯಿ ಮತ್ತು 18ರಿಂದ 45 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಬೇಕು. ಆರೋಗ್ಯ ಕಾರ್ಯಕರ್ತರ ಕುಟುಂಬದವರೆಂದು ಪರಿಗಣಿಸಲು ನೀಡುವ ದಾಖಲೆಯನ್ನು ಆರೋಗ್ಯ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುವ ಸಂಸ್ಥೆಯ ಮುಖ್ಯಸ್ಥರು ಪರಿಶೀಲಿಸಿ ಪ್ರಮಾಣೀಕರಿಸಬೇಕು.
ಈ ಗುಂಪಿನಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದಿಂದ ಸರಬರಾಜಾದ ಲಸಿಕೆ ಬಳಸಬೇಕು. 18-44 ವರ್ಷದೊಳಗಿನವರಿಗೆ ರಾಜ್ಯ ಸರ್ಕಾರದಿಂದ ಖರೀದಿಸಿದ ಲಸಿಕೆಗಳನ್ನು ಬಳಸಬೇಕು ಎಂದು ರಾಷ್ಟ್ರೀಯ ಅಭಿಯಾನ ನಿರ್ದೇಶಕರು ಸೂಚನೆ ನೀಡಿದ್ದಾರೆ. ಆದರೆ ಇದರ ಮಾಹಿತಿ ಇಲ್ಲದೇ ಲಸಿಕಾಕರಣಕ್ಕೆ ಹಿನ್ನಡೆಯಾಗಿದೆ.