Advertisement

ಬಿತ್ತನೆ ಬೀಜ-ರಸಗೊಬ್ಬರ ಪೂರೈಕೆಗೆ ಸರ್ಕಾರ ಬದ್ಧ

09:29 PM Jun 09, 2021 | Team Udayavani |

ದಾವಣಗೆರೆ: ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ. ರೈತರಿಗೆ ಯಾವುದೇ ರೀತಿ ಕೊರತೆಯಾಗದಂತೆ ಬೀಜ ಹಾಗೂ ಗೊಬ್ಬರ ಪೂರೈಕೆಗೆ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 1.63 ಲಕ್ಷ ಕ್ವಿಂಟಲ್‌ನಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ಗೊಬ್ಬರ ಲಭ್ಯ ಇದೆ.

ಈಗಾಗಲೇ ರಾಜ್ಯದಲ್ಲಿ 87,629 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, 1.63 ಲಕ್ಷ ಕ್ವಿಂಟಲ್‌ ಬೀಜ ದಾಸ್ತಾನಿದೆ ಎಂದರು. ಸರ್ಕಾರದಿಂದ 14 ಬಗೆಯ ಬೆಳೆಗಳ ಬೀಜಗಳಿಗೆ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ ಮೊದಲು 50 ಕೋಟಿ ರೂ., ಕಳೆದ ಭಾನುವಾರ 30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಕಳಪೆ ಬಿತ್ತನೆ ಬೀಜ ಮಾರಾಟ, ಹೆಚ್ಚಿನ ದರದಲ್ಲಿ ಬೀಜ ಹಾಗೂ ಗೊಬ್ಬರ ಮಾರಾಟ ಮಾಡುವ ಅಥಕೃತಕ ಅಭಾವ ಸೃಷ್ಟಿಸುವರನ್ನು ಕೃಷಿ ಇಲಾಖೆಯ ಜಾಗೃತ ದಳ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿದೆ. ಅಂತಹ ಯಾವುದೇ ಪ್ರಕರಣ ಕಂಡುಬಂದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು ಹಾಗೂ ಪರವಾನಗಿ ರದ್ದುಪಡಿಸಲಾಗುವುದು.

ದಾವಣಗೆರೆ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಜೈವಿಕ ಕೀಟನಾಶಕ ಮಾರಾಟದ 59 ಪ್ರಕರಣ ಪತ್ತೆ ಹಚ್ಚಿ ಮೊಕದ್ದಮೆ ಹೂಡಲಾಗಿದೆ. ಕೃಷಿ ಪರಿಕರ ಮಾರಾಟ ಮಾಡುವ 10 ಅಂಗಡಿಗಳ ಪರವಾನಗಿ ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.

Advertisement

ಜಂಟಿ ಕೃಷಿ ನಿರ್ದೇಶಕ ಡಾ| ಶ್ರೀನಿವಾಸ್‌ ಚಿಂತಾಲ್‌ ಮಾತನಾಡಿ, ಈ ವರ್ಷ 120 ಮಿಮೀ ವಾಡಿಕೆ ಮಳೆಗೆ 203 ಮಿಮೀ ಹೆಚ್ಚು ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 2.43 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ ಈವರೆಗೆ 8,002 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಒಟ್ಟು 46,922 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನಿದೆ.

ಈವರೆಗೆ ಒಟ್ಟು 29,345 ಮೆಟ್ರಿಕ್‌ ಟನ್‌ ರಸಗೊಬ್ಬರ ವಿತರಿಸಲಾಗಿದೆ. ಒಟ್ಟು 40,798 ಟನ್‌ ರಸಗೊಬ್ಬರ ದಾಸ್ತಾನು ಇದೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ, ಹಾಗೂ ಗೊಬ್ಬರದ ಕೊರತೆ, ಅನಾನುಕೂಲವಾಗದಂತೆ ಕೃಷಿ ಸಾಮಗ್ರಿ ಪೂರೈಕೆಗೆ ಸರ್ಕಾರ ಬದ್ಧವಿದೆ ಎಂದರು. ಜಿಲ್ಲೆಯಲ್ಲಿ ಮೆಕ್ಕೆಜೋಳದೊಂದಿಗೆ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಉತ್ತೇಜನ ನೀಡಬೇಕು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯವನ್ನು ಅಂತರ ಬೆಳೆಯಾಗಿ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ ಎಂದರು.

ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆ ಅತ್ಯುತ್ತಮ ಬೆಳೆ ವಿಮಾ ಯೋಜನೆಯಾಗಿದೆ. ಅಧಿ ಕಾರಿಗಳು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು. ಸಭೆಗೂ ಮುನ್ನ ಸಚಿವ ಬಿ.ಸಿ. ಪಾಟೀಲ್‌ ಕೃಷಿ ಜಾಗೃತಿ ಅಭಿಯಾನದ ವಿಶೇಷ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next