ದಾವಣಗೆರೆ: ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರೊದಗಿಸುವ ದೀಟೂರು ಏತ ನೀರಾವರಿ ಯೋಜನೆ ಕಾಮಗಾರಿಯಲ್ಲಿ ತಾಂತ್ರಿಕ ತಜ್ಞರ ಸಲಹೆಯಂತೆ ಎಚ್.ಡಿ. ಪೈಪ್ ಅಳವಡಿಸಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿಗೆ ಎಚ್.ಡಿ. ಪೈಪ್ ಬಳಸುವುದರಿಂದ 100 ರಿಂದ 150 ವರ್ಷಗಳ ಪೈಪ್‌ಗ್ಳು ಬಾಳಿಕೆ ಬರುತ್ತವೆ. ನೀರು ಲೀಕೇಜ್, ಸೋರಿಕೆ ಪ್ರಮಾಣ ಕಡಿಮೆ. ಹಾಗಾಗಿ ಈಗ ಅಳವಡಿಸಲಾಗುತ್ತಿರುವ ಎಂ.ಎಸ್. ಪೈಪ್ ಬದಲಿಗೆ ಎಚ್.ಡಿ. ಪೈಪ್ ಅಳವಡಿಸಬೇಕು ಎಂದರು.
ಒಟ್ಟಾರೆ 660 ಕೋಟಿ ರೂ. ವೆಚ್ಚದ ಜಗಳೂರು ತಾಲೂಕಿನ 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರೊದಗಿಸುವ ದೀಟೂರು ಏತ ನೀರಾವರಿ ಯೋಜನೆಯ ಪ್ರಾರಂಭಿಕ ಹಂತದಲ್ಲಿ ಕಾಮಗಾರಿ ಸ್ಥಳದಲ್ಲೇ ಪೈಪ್ ಸಿದ್ಧಪಡಿಸಿ ಅಳವಡಿಸಲಾಗುತ್ತಿತ್ತು. ಎಂ.ಎಸ್. ಪೈಪ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ್ಖಾನೆಗಳಲ್ಲಿ ತಯಾರಿಸಿದ ಪೈಪ್ ಅಳವಡಿಸಲಾಗುತ್ತಿತ್ತು. ಈಗ ಮತ್ತೆ ಎಂ.ಎಸ್. ಪೈಪ್‌ಗ್ಳನ್ನೇ ಅಳವಡಿಸಲಾಗುತ್ತಿದೆ. ಗುತ್ತಿಗೆದಾರರಿಗೆ ಅನುಕೂಲ ಆಗುವಂತೆ ಎಂ.ಎಸ್. ಪೈಪ್ ಅಳವಡಿಕೆ ಕುರಿತಂತೆ ಆದೇಶ ಹೊರಡಿಸಲಾಗಿದೆ ಎಂದು ದೂರಿದರು.
ಎಂ.ಎಸ್. ಪೈಪ್‌ಗ್ಳು 25 ರಿಂದ 40 ವರ್ಷ ಮಾತ್ರ ಬಾಳಿಕೆ ಬರುತ್ತವೆ. ಯುಟಿ ಪರೀಕ್ಷೆಯಲ್ಲೂ ಎಂ.ಎಸ್. ಪೈಪ್ ಬಹಳ ದಿನ ಬಾಳಿಕೆ ಬರುವುದಿಲ್ಲ ಎಂಬುದು ಗೊತ್ತಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದ ಯೋಜನೆಯ ಮೂಲ ಉದ್ದೇಶವೇ ಈಡೇರುವುದಿಲ್ಲ. ಈಗ ಏನಾದರೂ ಸುಮ್ಮನಾದಲ್ಲಿ ನಮ್ಮ ಮುಂದಿನ ಪೀಳಿಗೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿಯೇ ಎಂ.ಎಸ್. ಪೈಪ್‌ಗ್ಳ ಬದಲಿಗೆ ಎಚ್.ಡಿ. ಪೈಪ್ ಅಳವಡಿಸಬೇಕು ಮತ್ತು ಲೋಪ ದೋಷ ಸರಿಪಡಿಸಬೇಕು ಎಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು.
ಎಂ.ಎಸ್. ಪೈಪ್ ಅಳವಡಿಸುತ್ತಿರುವ ಬಗ್ಗೆ ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ವಿ. ರಾಮಚಂದ್ರ ಅವರ ಗಮನಕ್ಕೆ ತರಲಾಗಿದೆ. ಎಂ.ಎಸ್. ಪೈಪ್‌ಗ್ಳ ಸಾಮರ್ಥ್ಯದ ಬಗ್ಗೆ ಪರೀಕ್ಷೆ ನಡೆಸಿಕೊಡುವಂತೆ ಯುಬಿಡಿಟಿ, ಬಿಐಇಟಿ ಇಂಜಿನಿಯರಿಂಗ್ ಕಾಲೇಜಿನವರಿಗೆ ಕೋರಲಾಗಿದೆ. ಚಟ್ನಹಳ್ಳಿ ಗುಡ್ಡದವರೆಗೆ ಪೈಪ್‌ಲೈನ್ ಬರಲಿದೆ. ಅಲ್ಲಿಂದ ಗುರುತ್ವಾಕರ್ಷಣ ಬಲದಿಂದ ಮುಂದಕ್ಕೆ ನೀರು ಹರಿಯಲಿದೆ. 22 ಕೆರೆಗಳ ಏತ ನೀರಾವರಿ ಯೋಜನೆಯಂತೆ ಈ ಯೋಜನೆಯೂ ಹಾಳಾಗಬಾರದು.
ಆ ಕಾರಣಕ್ಕಾಗಿಯೇ ಎಚ್.ಡಿ. ಪೈಪ್ ಅಳವಡಿಸಬೇಕು. ತಾಲೂಕಿನ ಯುವ ಸಮೂಹ ಯೋಜನೆ ಕಾಮಗಾರಿಯತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ದೇವಿಕೆಗೆ ಗ್ರಾಮ ಪಂಚಾಯಿತಿ ಸದಸ್ಯ ಯು. ಗುರುಸ್ವಾಮಿ, ಚಟ್ನಿಹಳ್ಳಿ ಜಂಬುಗೌಡ್ರು, ಪ್ರಭು ಅಣಜಿಗೆರೆ ಸುದ್ದಿಗೋಷ್ಠಿಯಲ್ಲಿದ್ದರು.