ದಾವಣಗೆರೆ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಸಂಪೂರ್ಣ ಲಾಕ್‌ಡೌನ್ ಮಧ್ಯೆ ಸೋಮವಾರ ಮೂರನೇ ಬಾರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ಎಂದಿನಂತೆ ಜನಸಂದಣಿ, ವಾಹನ ದಟ್ಟಣೆ ಕಂಡು ಬಂತು. ಜೂ.14 ರವರೆಗೆ ಸಂಪೂರ್ಣ ಲಾಕ್ ಡೌನ್ ಮುಂದುವರೆಸಿರುವ ಜಿಲ್ಲಾಡಳಿತ ಜೂ.7, 9 ಹಾಗೂ 11 ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳ ಅವಕಾಶ ಮಾಡಿಕೊಟ್ಟಿದೆ.
ಬೆಳಗ್ಗೆಯಿಂದಲೇ ಜನರು ತಂಡೋಪತಂಡವಾಗಿ ದಿನಸಿ, ತರಕಾರಿ, ಮಾಂಸ ಖರೀದಿಗೆ ಮುಗಿ ಬಿದ್ದರು. ಜಿಲ್ಲಾಡಳಿತ ಪ್ರತಿ ಮೂರು ದಿನಕ್ಕೆ ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದರೂ ಜನರು ಎಂದೆಂದಿಗೂ ಖರೀದಿ ಮಾಡಿಯೇ ಇಲ್ಲವೇನೋ ಎನ್ನುವಂತೆ ದೌಡಾಯಿಸಿದರು.
ಕೆ.ಆರ್. ಮಾರುಕಟ್ಟೆ ಆಸುಪಾಸು ಜನ, ವಾಹನಗಳ ದಟ್ಟಣೆಯಿಂದ ಟ್ರಾμಕ್ ಜಾಮ್ ಉಂಟಾಗಿತ್ತು. ಮಂಡಿಪೇಟೆ, ಚೌಕಿಪೇಟೆ, ವಿಜಯಲಕ್ಷ್ಮಿ ರಸ್ತೆ, ಗಡಿಯಾರದ ಕಂಬ ರಸ್ತೆ, ದೊಡ್ಡಪೇಟೆ, ಎನ್.ಆರ್. ರಸ್ತೆ, ಕೆ.ಆರ್. ರಸ್ತೆ, ವಿನೋಬ ನಗರ ಎರಡನೇ ಮುಖ್ಯ ರಸ್ತೆ, ವಿದ್ಯಾನಗರ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ ಸೇರಿದಂತೆ ಎಲ್ಲ ಕಡೆ ದಿನಸಿ, ತರಕಾರಿ ಖರೀದಿ ಭರ್ಜರಿಯಾಗಿತ್ತು. ಮಾಮೂಲು ದಿನಗಳಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಎಲ್ಲಿ ನೋಡಿದರೂ ವಾಹನಗಳ ಸಂಚಾರ ಅಧಿಕವಾಗಿತ್ತು. ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಜನರು, ಆಸ್ಪತ್ರೆಗೆ ತೆರಳುವರು ಮುಂದೆ ಸಾಗಲು ಹೆಣಗಾಡುವಂತಾಗಿತ್ತು ಎಂದರೆ ಜನ, ವಾಹನ ದಟ್ಟಣೆ ಹೇಗಿತ್ತು ಎಂಬುದು ಗೊತ್ತಾಗುತ್ತದೆ. ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ಜನರು ಅಕ್ಷರಶಃ ಸಾಮಾಜಿಕ ಅಂತರವನ್ನೇ ಮರೆತಿದ್ದರು. ಇನ್ನು ವಸ್ತುಗಳ ಖರೀದಿಗೆ ಇನ್ನಿಲ್ಲದ ಅವಸರದಲ್ಲಿದ್ದರು ಕಾರಣ ಅನೇಕ ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಬೆಲ್ಲ, ಹಿಟ್ಟು, ಅವಲಕ್ಕಿ ಒಳಗೊಂಡಂತೆ ಕೆಲವು ಪದಾರ್ಥಗಳೇ ದೊರೆಯದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಸಗಟು ಮಾರುಕಟ್ಟೆಯಲ್ಲೇ ದಿನಸಿ ಪದಾರ್ಥಗಳು ದೊರೆಯುತ್ತಿಲ್ಲ. ಬೇರೆ ಬೇರೆ ಕಡೆಯಿಂದ ದಿನಸಿ ಸಾಮಾನು ಬರುತ್ತಿಲ್ಲ. ಹಾಗಾಗಿ ಸರಿಯಾಗಿ ಮಾಲ್ ಸಿಗುತ್ತಿಲ್ಲ. ದುಡ್ಡು ಕೊಟ್ಟರೂ ಕೆಲವಾರು ಪದಾರ್ಥ ಸಿಗುತ್ತಲೇ ಇಲ್ಲ. ಆದ್ದರಿಂದ ನಾವೇ ಹೆಚ್ಚಿನ ರೇಟ್ ಕೊಟ್ಟು ಖರೀದಿ ಮಾಡಬೇಕಾಗಿದೆ. ಹೋಲ್‌ಸೇಲ್ ಅಂಗಡಿಗಳಲ್ಲಿ ಮಾಲ್ ಸಿಕ್ಕರೆ ನಮಗೇನು ತೊಂದರೆ ಇಲ್ಲ. ಆದರೆ ಸರಿಯಾಗಿ ಮಾಲ್ ಬರುತ್ತಿಲ್ಲ ಎಂದು ಕಿರಾಣಿ ಅಂಗಡಿಯವರ ದೂರು ವ್ಯಕ್ತವಾಯಿತು.
ದಿನಸಿ ಮಾತ್ರವಲ್ಲ, ತರಕಾರಿ ಕಥೆಯೂ ಇದೇ ಆಗಿತ್ತು. ಅನೇಕ ಭಾಗದಿಂದ ದಾವಣಗೆರೆಗೆ ಬರುತ್ತಿದ್ದಂತಹ ತರಕಾರಿ ಬರುವುದು ಕಡಿಮೆ ಆಗುತ್ತಿದೆ. ಹಾಗಾಗಿ ಧಾರಣೆಯಲ್ಲಿ ಬಹಳ ವ್ಯತ್ಯಾಸ ಆಗುತ್ತಿದೆ. ದಿನದಿಂದ ಬೇಡಿಕೆ ಜಾಸ್ತಿ ಆಗುತ್ತಿದೆ. ತರಕಾರಿ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಸಹಜವಾಗಿಯೇ ದರ ಹೆಚ್ಚಾಗುತ್ತಿದೆ. ಕೊರೊನಾ, ಲಾಕ್ ಡೌನ್ ಸಂಕಷ್ಟದ ನಡುವೆಯೂ ಜನರು ಹೆಚ್ಚಿನ ಬೆಲೆ ತೆತ್ತು ದಿನಸಿ, ತರಕಾರಿ ಖರೀದಿ ಮಾಡುವಂತಾಗಿದೆ. ದರ ಹೆಚ್ಚಿದ್ದರೂ ಖರೀದಿ ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಜನರು ಹೈರಣಾಗುತ್ತಿದ್ದಾರೆ. ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಅನುಮತಿ ನಡುವೆಯೇ ಕೆಲವಾರು ಕಡೆ ಗ್ಯಾರೇಜ್, ಎಲೆಕ್ಟ್ರಿಕಲ್, ಇತರೆ ಅಂಗಡಿ ತೆರೆದಿದ್ದವು.
ಎಷ್ಟು ದಿನ ಅಂತ ಬಾಗಿಲು ಹಾಕಿಕೊಂಡು ಇರೋಕೆ ಆಗುತ್ತದೆ. ನಮದೂ ಜೀವನ ನಡೆಯಬೇಕಲ್ಲ, ಈ ಲಾಕ್‌ಡೌನ್ ಯಾವಾಗ ಮುಗಿಯುತ್ತೋ ಅನಿಸುತ್ತಿದೆ. ವ್ಯಾಪಾರ ಏನೂ ಇಲ್ಲ. ಮನೆಯಲ್ಲೇ ಎಷ್ಟು ದಿನ ಅಂತಾ ಇರೋಕೆ ಆಗುತ್ತೆ ಎಂದು ಕೆಲವರು ಪ್ರಶ್ನಿಸಿದರು.
ಸಮಯ ಮುಗಿದ ನಂತರವೂ ಜನ, ವಾಹನ ಸಂಚಾರ ಕಂಡು ಬಂದಿತು. ಪೊಲೀಸರು, ಮಹಾನಗರ ಪಾಲಿಕೆ ಅಧಿಕಾರಿಗಳು ಸಂಚಾರ ನಡೆಸಿ, ಜಾಗೃತಿ ವಹಿಸುವಂತೆ ಮನವಿ ಮಾಡಿದರು. ನಿರ್ಬಂಧ ಉಲ್ಲಂಘಿಸಿದವರಿಗೆ ದಂಡದ ಬಿಸಿ ಮುಟ್ಟಿಸಿದರು.