Advertisement
ದಾವಣಗೆರೆ: ಭದ್ರಾ ಅಚ್ಚುಕಟ್ಟಿನ ದಾವಣಗೆರೆ ಜಿಲ್ಲೆಯಲ್ಲಿ ಬೇಸಿಗೆ ಭತ್ತದ ಹಂಗಾಮು ಪ್ರಾರಂಭವಾಗಿ ಸಾಕಷ್ಟು ದಿನ ಕಳೆದರೂ ಭತ್ತ ಖರೀದಿ ಕೇಂದ್ರ ಪ್ರಾರಂಭ ಆಗಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರ ಖರೀದಿ ಕೇಂದ್ರ ತೆರೆಯುವ ಮೂಲಕ ಭತ್ತದ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಒತ್ತಾಯ ಮಾಡುತ್ತಲೇ ಇದ್ದಾರೆ.
Related Articles
Advertisement
ಎಲ್ಲ ಹಂಗಾಮಿನಲ್ಲಿ ಭತ್ತ ಬೆಳೆಯೋದು, ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡುವುದು ನಡೆಯುತ್ತಲೇ ಇದೆ. ಆದರೆ ಕಳೆದ ವರ್ಷ ಮತ್ತು ಈ ವರ್ಷ ಕೊರೊನಾ ಕಾರಣಕ್ಕೆ ರೈತರು ಹೊರಗೆ ಬರದಂತಾಗಿದೆ. ಕೊರೊನಾದ ಬಗ್ಗೆ ಸರ್ಕಾರವೇ ಭಯ ಹುಟ್ಟುವಂತೆ ಮಾಡುತ್ತಿದೆ. ಹಾಗಾಗಿ ರೈತರು ಹೋರಾಟ ಮಾಡುವ ಮಾತೇ ದೂರ ಉಳಿಯುತ್ತಿದೆ. ಸರ್ಕಾರಕ್ಕೆ ಇದೇ ವರವಾಗಿದೆ.
ಹೇಳುವವರು, ಕೇಳುವವರು ಇಲ್ಲದಂತಾಗಿರುವುದರಿಂದ ಖರೀದಿ ಕೇಂದ್ರ ಪ್ರಾರಂಭಕ್ಕೆ ಮನಸ್ಸು ಮಾಡುತ್ತಿಲ್ಲ. ರೈತರ ಸಂಕಷ್ಟ ದೂರವಾಗುತ್ತಿಲ್ಲ ಎಂದು ಹೊನ್ನೂರು ಮುನಿಯಪ್ಪ ಬೇಸರ ವ್ಯಕ್ತಪಡಿಸುತ್ತಾರೆ.
ಜನಪ್ರತಿನಿಧಿಗಳ ಒತ್ತಾಯ: ಭತ್ತ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಜಿಲ್ಲೆಯ ಜನಪ್ರತಿನಿಧಿಗಳು ಸಹ ಒತ್ತಾಯ ಮಾಡುತ್ತಿದ್ದಾರೆ. ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರಿಗೆ ಈ ಬಗ್ಗೆ ಒತ್ತಾಯಿಸಿದ್ದಾರೆ. ಉಸ್ತುವಾರಿ ಸಚಿವರೂ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಖರೀದಿ ಕೇಂದ್ರ ಕೇಂದ್ರ ಪ್ರಾರಂಭವಾಗುವ ಹೊತ್ತಿಗೆ ಹಂಗಾಮು ಮುಗಿದು ಹೋದರೂ ಅಚ್ಚರಿ ಪಡಬೇಕಾಗಿಲ್ಲ.
ಜಿಲ್ಲೆಯ 53,431 ಹೆಕ್ಟೇರ್‌ನಲ್ಲಿದೆ ಭತ್ತ ಬೆಳೆ
ದಾವಣಗೆರೆ ತಾಲೂಕಿನಲ್ಲಿ 20,848 ಹೆಕ್ಟೇರ್ ಅಂತೆಯೇ ಹರಿಹರದಲ್ಲಿ 20,502, ಚನ್ನಗಿರಿಯಲ್ಲಿ 4,385. ಹೊನ್ನಾಳಿಯಲ್ಲಿ 5,033 ಹಾಗೂ ನ್ಯಾಮತಿಯಲ್ಲಿ 663 ಹೆಕ್ಟೇರ್ ಒಳಗೊಂಡಂತೆ ಜಿಲ್ಲೆಯ 53,431 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಈಗಾಗಲೇ ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಖರೀದಿ ಕೇಂದ್ರ ಪ್ರಾರಂಭವಾದಲ್ಲಿ ರೈತರಿಗೆ ಅನುಕೂಲ ಆಗಲಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರ ನಿರೀಕ್ಷಿತ ಧಾರಣೆಗಿಂತಲೂ ಕಡಿಮೆ ದರದಲ್ಲಿ ಖರೀದಿ ಮಾಡುವುದು ನಿಲ್ಲಲಿದೆ. ಹಾಗಾಗಿ ಸರ್ಕಾರ ಭತ್ತ ಖರೀದಿ ಕೇಂದ್ರ ಪ್ರಾರಂಭಕ್ಕೆ ಮುಂದಾಗುವುದು ತುರ್ತು ಅಗತ್ಯ.
ವಿಸ್ತರಣೆಗೆ ಮನವಿ
ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ರೈತರು ತಮ್ಮ ಹೆಸರು ನೋಂದಣಿಗೆ ಮೇ 5 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಕೊರೊನಾ, ಲಾಕ್‌ಡೌನ್ ಮತ್ತಿತರ ಕಾರಣಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ರೈತರು ನೋಂದಣಿ ಮಾಡಿಸಲು ಆಗಲಿಲ್ಲ. ಹಾಗಾಗಿ ನೋಂದಣಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಖರೀದಿ ಕೇಂದ್ರ ಪ್ರಾರಂಭಕ್ಕೆ ಅನುಮತಿ ನೀಡಿದರೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಆಹಾರ ಇಲಾಖೆ ಉಪನಿರ್ದೇಶಕ ಡಿ. ಮಂಟೇಸ್ವಾಮಿ ತಿಳಿಸಿದರು.