ಹೊನ್ನಾಳಿ: ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಂದ ಸಸಿ ನೆಡಿಸುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಶನಿವಾರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಧುನಿಕತೆ ಬೆಳೆದಂತೆ ಪರಿಸರ ನಾಶವಾಗುತ್ತಿದೆ. ಕಾಂಕ್ರಿಟ್ ಕಾಡು ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಸಿ ಬೆಳೆಸಬೇಕು. ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಕೊರೊನಾದಂತಹ ಭೀಕರ ಸಂದರ್ಭದಲ್ಲಿ ಮನುಷ್ಯ ಕೃತಕ ಉಸಿರಾಟವನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಜನರು ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದರು. ತಹಶೀಲ್ದಾರ್ ಬಸನಗೌಡ ಕೋಟೂರ, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿ ಎರಡನೇ ದಿನ ವಾಸ್ತವ್ಯ: ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೂರು ದಿನ ವಾಸ್ತವ್ಯ ಮಾಡಲಿರುವ ಶಾಸಕರು, ಎರಡನೇ ದಿನವಾದ ಶನಿವಾರ ಕೋವಿಡ್ ಕೇರ್ ಸೆಂಟರ್ ನಲ್ಲಿ ಕಳೆದರು. ರಾತ್ರಿ ವಾಯು ವಿಹಾರ ಮುಗಿಸಿ ಸೋಂಕಿತರ ಆರೋಗ್ಯ ವಿಚಾರಿಸಿ ಅವರೊಂದಿಗೆ ಕಾಲ ಕಳೆದರು.
ರಾತ್ರಿ 11 ಗಂಟೆಗೆ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿ ನಿದ್ದೆಗೆ ಜಾರಿದರು. ಕೊರೊನಾ ಸೋಂಕಿತರಿಗೆ ಮನರಂಜನೆ ನೀಡಿ ಆತ್ಮಸ್ಥೈರ್ಯ ತುಂಬಬೇಕೆಂಬ ಉದ್ದೇಶದಿಂದ ಬೆಂಗಳೂರಿನ ನಟರಾಜ್ ಮೆಲೋಡಿಸ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ಚಲನಚಿತ್ರಗೀತೆಗಳನನ್ನು ಹಾಡುವ ಮೂಲಕ ಸೋಂಕಿತರನ್ನು ರಂಜಿಸಲಾಯಿತು.
ಸೋಂಕಿತರು ನೋವನ್ನು ಮರೆತು ಕುಣಿದು ಕುಪ್ಪಳಿಸಿದರು. ಕೋವಿಡ್ ಕೇರ್ ಸೆಂಟರ್‌ನಲ್ಲಿ ವಾಸ್ತವ್ಯ ಮಾಡಿರುವ ಶಾಸಕರು ಕೊರೊನಾ ಸೋಂಕಿತರಿಗೆ ಪ್ರತಿ ನಿತ್ಯ ಬೆಳಗ್ಗೆ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಯೋಗಾಸನದ ವಿವಿಧ ಆಯಾಮಗಳನ್ನು ಸೋಂಕಿತರಿಗೆ ಮಾಡಿಸಿದ ಶಾಸಕರು ಎಲ್ಲರೂ ಯೋಗಾಭ್ಯಾಸ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಪತಿಯೊಂದಿಗೆ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸುಮಾ ರೇಣುಕಾಚಾರ್ಯ ಕೂಡ ಮಾಡುತ್ತಿದ್ದಾರೆ.