Advertisement

ಕೊರೊನಾ ಗೆದ್ದ ಗರ್ಭಿಣಿ-ಬಾಣಂತಿಯರು

10:27 PM Jun 03, 2021 | Team Udayavani |

ದಾವಣಗೆರೆ: ಕೊರೊನಾ ಎರಡನೇ ಅಲೆ ಮಧ್ಯೆಯೂ ಜಿಲ್ಲೆಯ ನೂರಾರು ಗರ್ಭಿಣಿಯರು, ಬಾಣಂತಿಯರು ಮತ್ತು ಹಸುಗೂಸುಗಳು ಸೋಂಕಿನಿಂದ ಗುಣಮುಖ ರಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋವಿಡ್‌ ಎರಡನೆ ಅಲೆ ಪ್ರಾರಂಭವಾದ ಏಪ್ರಿಲ್‌ ನಿಂದ ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತ ಒಟ್ಟು 124 ಗರ್ಭಿಣಿಯರಿಗೆ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ.

Advertisement

ಇದರಲ್ಲಿ 70 ಸೋಂಕಿತ ಗರ್ಭಿಣಿಯರಿಗೆ ಸಹಜ ಹೆರಿಗೆಯಾಗಿದ್ದರೆ, 54 ಸಿಜೇರಿಯನ್‌ (ಶಸ್ತ್ರಚಿಕಿತ್ಸೆ ) ಮೂಲಕ ಹೆರಿಗೆ ಆಗಿವೆ. 18 ಹಸುಗೂಸುಗಳಿಗೂ ಕೊರೊನಾ ಸೋಂಕು ತಗುಲಿತ್ತು. ಇದರಲ್ಲಿ 16 ಶಿಶುಗಳು ಕೊರೊನಾ ಸೋಂಕಿನಿಂದ ಗುಣಮುಖವಾಗಿವೆ. ತೀವ್ರ ಕ್ಲಿಷ್ಟಕರ ಪರಿಸ್ಥಿತಿಯ ಕಾರಣದಿಂದ ಎರಡು ಶಿಶುಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಒಟ್ಟು 18 ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆಯಾಗಿದ್ದು, ಇದರಲ್ಲಿ ಏಳು ಸಹಜ ಹೆರಿಗೆ ಹಾಗೂ 11 ಸಿಜೇರಿಯನ್‌ ಹೆರಿಗೆ ಮಾಡಿಸಲಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತ ಗರ್ಭಿಣಿಯರ ಚಿಕಿತ್ಸೆಗಾಗಿಯೇ ಪ್ರತ್ಯೇಕ ಐಸೋಲೇಷನ್‌ ವಾರ್ಡ್‌ ಪ್ರಾರಂಭಿಸಲಾಗಿದೆ.

ಇಲ್ಲಿಯೂ ಕೂಡ ಬೆಡ್‌ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್‌ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿತ ಗರ್ಭಿಣಿಯರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಹಾಗೂ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಶುಶ್ರೂಷಕರು ಸೋಂಕಿತ ಗರ್ಭಿಣಿಯರು, ಬಾಣಂತಿಯರ ಹಾಗೂ ಹಸುಗೂಸುಗಳ ಆರೋಗ್ಯ ಸುರಕ್ಷತೆಗಾಗಿ ಕೈಗೊಂಡ ಈ ವಿಶೇಷ ಕಾಳಜಿ ಪ್ರಶಂಸಾರ್ಹವಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿನ ಕೊರೊನಾ ಸೋಂಕಿತ ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುಗಳು ಕೊರೊನಾ ಗೆದ್ದು ಸುರಕ್ಷಿತವಾಗಿರುವುದು ಸಮಾಧಾನಕರ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next