Advertisement
ದಾವಣಗೆರೆ: ಶ್ವಾಸಕೋಶದ ಮೇಲೆ ದಾಳಿ ಇಡಬಹುದಾದ ಕ್ಷಯರೋಗ ಹಾಗೂ ಕೋವಿಡ್-19 ಎರಡನೇ ಅಲೆ ಹೊಡೆತಕ್ಕೆ ಸಿಲುಕಿದ ಜಿಲ್ಲೆಯ ಆರು ಜನರು ಎರಡೂ ಮಹಾಮಾರಿಗಳ ವಿರುದ್ಧ ಹೋರಾಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊರೊನಾ ಎರಡನೇ ಅಲೆಯ ಸೋಂಕು ಜಿಲ್ಲೆಯ ಒಟ್ಟು ಎಂಟು ಜನ ಕ್ಷಯರೋಗಿಗಳಿಗೆ ಹಬ್ಬಿತ್ತು. ಇವರಲ್ಲಿ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Related Articles
Advertisement
ಇವರಲ್ಲಿ ದಾವಣಗೆರೆ ಗ್ರಾಮಾಂತರದ ಒಬ್ಬರು, ದಾವಣಗೆರೆ ನಗರದ ಇಬ್ಬರು, ಹರಿಹರ ತಾಲೂಕಿನ ಒಬ್ಬರು ಹಾಗೂ ಹೊನ್ನಾಳಿ ತಾಲೂಕಿನ ಇಬ್ಬರು ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಜೀವ ಕಾಪಾಡಿಕೊಂಡಿದ್ದಾರೆ. ದಾವಣಗೆರೆ ಗ್ರಾಮಾಂತರ ಹಾಗೂ ಹರಿಹರದ ತಲಾ ಒಬ್ಬರು ಸೇರಿ ಒಟ್ಟು ಇಬ್ಬರು ಕ್ಷಯ ರೋಗಿಗಳು ಕೊರೊನಾ ಮಹಾಮಾರಿ ಎದುರಿಸಲಾಗದೆ ಮೃತಪಟ್ಟಿದ್ದಾರೆ.
ಚನ್ನಗಿರಿ ತಾಲೂಕಿನ 101, ದಾವಣಗೆರೆ ಗ್ರಾಮೀಣ ಭಾಗದ 81, ದಾವಣಗೆರೆ ನಗರ ಭಾಗದ 249, ಹರಿಹರ ತಾಲೂಕಿನ 62, ಹೊನ್ನಾಳಿ ತಾಲೂಕಿನ 80, ಜಗಳೂರು ತಾಲೂಕಿನ 67 ಕ್ಷಯರೋಗಿಗಳು ಕೊರೊನಾ ತಮ್ಮತ್ತ ಸುಳಿಯದಂತೆ ಅಗತ್ಯ ಸುರಕ್ಷತಾ ಕ್ರಮ ಪಾಲನೆಯೊಂದಿಗೆ ಕೊರೊನಾ ಸೋಂಕಿನಿಂದ ದೂರ ಇದ್ದಾರೆ. ಕೊರೊನಾ ಎರಡನೇ ಅಲೆಯ ಆರ್ಭಟ ಇಳಿಯುವವರೆಗೂ ಈ ಕ್ಷಯರೋಗಿಗಳು ಸುರಕ್ಷತೆ, ಜಾಗರೂಕತೆಯನ್ನು ಮರೆಯದೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿರುವ ಬಹುತೇಕ ಕ್ಷಯರೋಗಿಗಳು ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸುವ ಮೂಲಕ ಕೊರೊನಾ ಮಹಾಮಾರಿಯಿಂದ ತಮ್ಮನ್ನು ತಾವು ರಕ್ಷಿಸಿಕೊಂಡಿರುವುದು ಸಮಾಧಾನಕರ ಸಂಗತಿ.