ಹೊನ್ನಾಳಿ : ದೇಶಾದ್ಯಂತ ಹಬ್ಬಿರುವ ಕೊರೊನಾ ಮನುಕುಲವನ್ನು ತಲ್ಲಣಗೊಳಿಸಿದೆ. ಈ ಮಹಾಮಾರಿಯಿಂದ ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಹಿರೇಕಲ್ಮಠ ಅನಾಥ ಮಕ್ಕಳಿಗೆ ಆಶ್ರಯ ಕೊಟ್ಟು ಪೋಷಿಸುವ ಹೊಣೆ ವಹಿಸಿಕೊಳ್ಳಲಿದೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಡಾ|ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ 2ನೇ ಅಲೆ ಮನುಷ್ಯ ಸಂಕುಲಕ್ಕೆ ಅಘಾತ ನೀಡಿದೆ.
ಬಹಳಷ್ಟು ಮಕ್ಕಳ ತಂದೆ, ತಾಯಿ ಹಾಗೂ ಕುಟುಂಬದ ಸದಸ್ಯರನ್ನು ನುಂಗಿ ಹಾಕಿದೆ. ಮಕ್ಕಳನ್ನು ನೋಡಿ ಕೊಳ್ಳುವವರೇ ಇಲ್ಲದಂ ತಾಗಿದೆ.ಅಂತಹ ಮಕ್ಕಳನ್ನು ತಕ್ಷಣ ರಕ್ಷಣಾದಾತರು ಮುಂದೆ ಬಂದು ಕಾಪಾಡು ವಂತಾಗಬೇಕು ಎಂದು ಹೇಳಿದರು.
ರಾಜ್ಯದ ಯಾವುದೇ ಮೂಲೆಯ ಮಕ್ಕಳು ಅನಾಥ ರಾಗಿದ್ದರೆ ತಕ್ಷಣ ಅವರನ್ನು ಹಿರೇಕಲ್ಮಠಕ್ಕೆ ಕರೆತಂದು ಬಿಡಬಹುದು. ಅನಾಥ ಮಕ್ಕಳಿಗೆ ಶ್ರೀ ಮಠದಲ್ಲಿ ಊಟ, ವಸತಿ ಕೊಟ್ಟು ಪೋಷಿಸುವ ಕಾರ್ಯ ಮಾಡಲಾಗುವುದು. ಅಲ್ಲದೇ ಶ್ರೀಮಠದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ಕೊಡಿಸಲಾಗುವುದು ಎಂದು ತಿಳಿಸಿದರು.
ಶ್ರೀಮಠದ ವತಿಯಿಂದ ಎಲ್‌ಕೆಜಿಯಿಂದ ಪದವಿ ಹಾಗೂ ಪದವಿ ನಂತರ ಶಿಕ್ಷಣ ಶಿಕ್ಷಕರ ತರಬೇತಿ (ಬಿಇಡಿ) ಕಾಲೇಜುವರೆಗಿನ ಶಿಕ್ಷಣ ಸಂಸ್ಥೆಗಳು ಇದ್ದು, ಅನಾಥ ಮಕ್ಕಳು ಶ್ರೀಮಠದಲ್ಲಿ ವಾಸ್ಯವ್ಯ ಮಾಡಿ ಪದವಿ ಮುಗಿಸಬಹುದಾಗಿದೆ ಎಂದು ಹೇಳಿದರು. ಅಗತ್ಯ ಬಿದ್ದಲ್ಲಿ ಶ್ರೀಮಠದ ವತಿಯಿಂದ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಮುಂದಾಗಲಾಗುವುದು.
ಅನಾಥ ಮಕ್ಕಳನ್ನು ಮಠಕ್ಕೆ ಸೇರಿಸಲು ದೂರವಾಣಿ ಸಂಖ್ಯೆ 9916322247 ಮತ್ತು 9448154536ಗಳನ್ನು ಸಂಪರ್ಕಿಸಬಹುದು ಎಂದು ಶ್ರೀಗಳು ತಿಳಿಸಿದರು. ಶ್ರೀ ಮಠದ ವ್ಯವಸ್ಥಾಪಕ ಚನ್ನಬಸಯ್ಯ ಇದ್ದರು.