Advertisement

7ರವರೆಗೂ ಜಿಲ್ಲಾದ್ಯಂತ ಲಾಕ್‌ ಡೌನ್‌

08:48 PM May 30, 2021 | Team Udayavani |

ದಾವಣಗೆರೆ: ಜಿಲ್ಲೆಯಾದ್ಯಂತ ಜೂನ್‌ 7ರವರೆಗೆ ಲಾಕ್‌ ಡೌನ್‌ ಮುಂದವರಿಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಲಾಕ್‌ಡೌನ್‌ ವಿಸ್ತರಣೆ ಕುರಿತು ವಿವರಣೆ ನೀಡಿದರು. ಜಿಲ್ಲೆಯಲ್ಲಿ ಸತತವಾಗಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ಪ್ರಮಾಣ ತಗ್ಗಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದಾಗ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಕೆಲವೊಂದು ನಿರ್ಬಂಧ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿರ್ಬಂಧಗಳನ್ವಯ ಮೇ 31 ಮತ್ತು ಜೂ.3 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು, ಮದ್ಯದ ಅಂಗಡಿಗಳಿಗೆ ಮಾತ್ರ ಅವಕಾಶ ಇದ್ದು ಉಳಿದ ದಿನಗಳು ಹಾಲು ಮತ್ತು ಔಷಧಿಗಳನ್ನು ಹೊರತುಪಡಿಸಿ ಸಂಪೂರ್ಣವಾಗಿ ಬಂದ್‌ ಇರುತ್ತದೆ ಎಂದರು.

ಜೂನ್‌ 4ವರೆಗೆ ಮಾತ್ರ ನಿಗದಿಯಾಗಿರುವ ಮದುವೆ ಕಾರ್ಯಕ್ರಮ ನಡೆಸಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದು ಗರಿಷ್ಠ 10 ಜನರು ಮಾತ್ರ ಭಾಗವಹಿಸಿ ಮದುವೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದೆ. ಈ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲಿ ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಕೀಟ ನಾಶಕಗಳು, ಕೃಷಿ ಕೋಯ್ಲು ಯಂತ್ರೋಪಕರಣಗಳ ಸಾಗಣೆ ಮತ್ತು ಸಂಬಂಧಿಸಿದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವ್ಯಾಪಾರ, ವಹಿವಾಟು ನಡೆಸಲು ಅನುಮತಿಸಲಾಗಿದೆ.

ಸಾರ್ವಜನಿಕರು ಅಗತ್ಯ ಚಟುವಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿಸಿ, ನಡೆದುಕೊಂಡು ಹೊಗಲು ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಸಂಸ್ಕಾರ, ಶವ ಸಂಸ್ಕಾರಗಳಲ್ಲಿ ಗರಿಷ್ಠ 5 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಲಾಗಿದೆ. ದಾವಣಗೆರೆ ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್‌ಪೋಸ್ಟ್‌ಗಳಲ್ಲಿ ವಿಚಾರಣೆ ನಡೆಸಿ, ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್‌ ಸಂಖ್ಯೆ ಪಡೆದುಕೊಳ್ಳಲಾಗುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗುವುದು ಎಂದರು.

21 ಬ್ಲಾ ಕ್‌ ಫಂಗಸ್‌: ಜಿಲ್ಲೆಯಲ್ಲಿ ಈ ದಿನದವರೆಗೆ ಒಟ್ಟು 21 ಮ್ಯುಕರ್‌ವೆುçಕೋಸಿಸ್‌(ಬ್ಲಾಕ್‌ ಫಂಗಸ್‌) ಪ್ರಕರಣಗಳು ವರದಿಯಾಗಿವೆ. ಕೋವಿಡ್‌ನಿಂದ ಇದುವರೆಗೆ 342 ಜನ ಮೃತರಾಗಿದ್ದಾರೆ. ಎರಡನೇ ಅಲೆಯಲ್ಲಿ 78 ಜನರು ಮೃತ ಹೊಂದಿದ್ದು ಇದರಲ್ಲಿ ಪುರುಷರು 49 ಮಹಿಳೆಯರು 29 ಇದ್ದಾರೆ.

Advertisement

ಹೋಂ ಐಸೋಲೇಷನ್‌ 2851, ಆಸ್ಪತ್ರೆಯಲ್ಲಿ 2486 ದಾಖಲಾಗಿದ್ದಾರೆ. 5337 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ್‌ ದಾನಮ್ಮನವರ್‌ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಪ್ರಸ್ತುತ 183 ಗ್ರಾಮಗಳಲ್ಲಿ ಸಕ್ರಿಯ ಪ್ರಕರಣಗಳು ಇಲ್ಲ. 419 ಗ್ರಾಮಗಳಲ್ಲಿ 1 ರಿಂದ 5 ಪ್ರಕರಣಗಳು, 101 ಗ್ರಾಮಗಳಲ್ಲಿ 6 ಇಂದ 10 ಪ್ರಕರಣ ಮತ್ತು 74 ಗ್ರಾಮಗಳಲ್ಲಿ 10 ಕ್ಕಿಂತ ಹೆಚ್ಚು ಪ್ರಕರಣಗಳು ಇವೆ. 1343 ಜನರು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ದಾಖಲಿಸಲಾಗಿದೆ. ಗ್ರಾಮಗಳಲ್ಲಿ ಸಾರ್ವಜನಿಕ ಪೂಜೆ ನಿಷೇಧಿಸಲಾಗಿದೆ. ವಾರಕ್ಕೆರಡು ಬಾರಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿಎಚ್‌ಓ ಡಾ.ನಾಗರಾಜ್‌, ಆರ್‌ಸಿಎಚ್‌ ಅಧಿಕಾರಿ ಡಾ.ಮೀನಾಕ್ಷಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next